ಬೈಲಹೊಂಗಲ(ಬೆಳಗಾವಿ): ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದರೆ, ಇದರ ನಡುವೆಯೂ ಜಿಲ್ಲೆಯಾದ್ಯಂತ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ ಜೋರಾಗಿಯೇ ನಡೆಯುತ್ತಿದ್ದು, ಕಳ್ಳಭಟ್ಟಿ ಮಾರುತ್ತಿದ್ದ ಆರೋಪಿಗಳನ್ನು ಇಂದು ಬಂಧಿಸಲಾಗಿದೆ.
ತಾಲೂಕಿನ ಹಳೆ ರಂಗೋಲಿ ಕಾರ್ಖಾನೆಯ ಬಳಿ ಏ. 28ರಂದು ಕಳ್ಳಭಟ್ಟಿ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೈಲಹೊಂಗಲ ಅಬಕಾರಿ ನಿರೀಕ್ಷಕ ರವಿ ಮುರಗೋಡ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕ ಬಸವರಾಜ ಕರವಿನಕೊಪ್ಪ ಹಾಗೂ ಅಬಕಾರಿ ಇಲಾಖೆಯ ಸಿಬ್ಬಂದಿ ನೇತೃತ್ವದಲ್ಲಿ ತಂಡ ರಚಿಸಿ ಅಕ್ರಮ ಕಳ್ಳಭಟ್ಟಿ ಸಾಗಿಸುತ್ತಿರುವ ಬಾಳಪ್ಪ ಕೆಂಚನ್ನವರ ಎಂಬ ಆರೋಪಿಯನ್ನು ಬಂಧಿಸಿದ್ದು, ಎರಡು ದ್ವಿಚಕ್ರ ವಾಹನ ಹಾಗೂ 18,800 ರೂ. ಮೌಲ್ಯದ ಕಳ್ಳಭಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೈಲಹೊಂಗಲ ವೃತ್ತದ ಅಬಕಾರಿ ನಿರೀಕ್ಷಕ ರವಿ ಮುರಗೋಡ ತಿಳಿಸಿದ್ದಾರೆ.