ಚಿಕ್ಕೋಡಿ: ನೀರಾವರಿ ಇಲಾಖೆಗೆ ಯಾವುದೇ ಪಕ್ಷಭೇದವಿರುವುದಿಲ್ಲ. ನಾನೂ ಕೂಡಾ ಯಾವುದೇ ಪಕ್ಷ ಭೇದ ಭಾವ ಮಾಡದೇ ಕಾರ್ಯನಿರ್ವಹಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪುರ (ಹಳೆದಿಗ್ಗೇವಾಡಿ) ಮತ್ತು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮಗಳ ಮಧ್ಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ಸಮಾರಂಭಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 18 ಕ್ಷೇತ್ರದ ಎಲ್ಲ ಗ್ರಾಮಗಳು ನೀರಾವರಿ ವಂಚಿತರಾಗಬಾರದು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಗೋಕಾಕ ಕ್ಷೇತ್ರದಲ್ಲಿ 90% ರಷ್ಟು ನೀರಾವರಿ ಮಾಡಿದ್ದೇನೆ. ಇದು ಕೂಡಾ ನನ್ನ ಸತತ ಗೆಲುವಿಗೆ ಕಾರಣ ಎಂದರು.
ಉತ್ತರ ಕರ್ನಾಟಕದ ಮೂಲೆಮೂಲೆಗೆ ನೀರಾವರಿ ಕೆಲಸ ಮಾಡಲು ಪ್ರಯತ್ನ ಮಾಡುತ್ತೇನೆ. ರಾಜಕಾರಣಿಗಳು ಪಕ್ಷಪಾತ ಜಾತಿ ಬೇಧ ಮರೆತು ಅಭಿವೃದ್ಧಿ ಕೆಲಸ ಮಾಡಲು ಎಲ್ಲರು ಸಹಕಾರ ಮಾಡಬೇಕೆಂದು ಹೇಳಿದರು.
ನಮ್ಮ ಸರ್ಕಾರ ಯಡಿಯೂರಪ್ಪ ಹಾಗೂ ನಮ್ಮ ಎಲ್ಲ ಶಾಸಕರು ರೈತರ ಪರವಾಗಿ ಕೆಲಸ ಮಾಡುತ್ತೇವೆ. ಗೋಕಾಕ ಮತ್ತು ಅರಭಾವಿ ನೀರಾವರಿ ಕೆಲಸ ಮುಗಿದಿವೆ. ಇನ್ನೇನಿದ್ದರು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯನ್ನು ಕೋರೆ ಅವರ ನೇತೃತ್ವದಲ್ಲಿ ನೀರಾವರಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.