ಅಥಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್ಕೆಡಿಆರ್ಡಿಪಿ)ಯಡಿ ಅಥಣಿ ತಾಲೂಕಿನ ದೇವಸ್ಥಾನಗಳಿಗೆ ಕಸದ ಡಬ್ಬಿ, ಶಿಷ್ಯವೇತನ ಮತ್ತು ಕೌಶಲ್ಯ ತರಬೇತಿ ಯೋಜನೆಯ ಪಲಾಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಈ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕೋಡಿ ಜಿಲ್ಲಾ ನಿರ್ದೇಶಕ ಕೃಷ್ಣಾ ಟಿ. ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸರ್ವಧರ್ಮಗಳ ಶ್ರದ್ಧಾ ಕೇಂದ್ರವಾಗಿ ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದೆ. ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗಬೇಕು ಎಂಬ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವಿರೇಂದ್ರ ಹೆಗ್ಗಡೆಯವರು ನಾಡಿನ ಎಲ್ಲಾ ಶ್ರದ್ಧಾ ಕೇಂದ್ರಗಳಿಗೆ ಕಸ ಸಂಗ್ರಹಣಾ ಡಬ್ಬಿಗಳನ್ನು ವಿತರಿಸುವ ಯೋಜನೆಯನ್ನು ಆರಂಭಿಸಿದ್ದಾರೆ. ಹತ್ತು ಸಾವಿರ ಶ್ರದ್ಧಾ ಕೇಂದ್ರಗಳಿಗೆ ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ಘನ ತ್ಯಾಜ್ಯ ಸಂಗ್ರಹಣಾ ಡಬ್ಬಿಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರು ಪರಿಶುದ್ಧ ಭಕ್ತಿಯ ಜೊತೆಗೆ ಪರಿಸರ ಸ್ವಚ್ಛತೆಗೂ ಕೈಜೋಡಿಸಬೇಕು. ಸಂಕ್ರಮಣದ ವೇಳೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯಲ್ಲಿ 16,500 ಮಹಿಳಾ ಸ್ವಸಹಾಯ ಸಂಘಗಳಿಗೆ 350 ಕೋಟಿ ರೂ. ಸಹಾಯಧನ ವಿತರಿಸಲಾಗಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ, ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಇದರ ಸೌಲಭ್ಯ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.