ಬೆಳಗಾವಿ: ಕಳೆದ 4 ದಿನಗಳಿಂದ ಬೆಳಗಾವಿಯಲ್ಲಿ ಆಕ್ಸಿಜನ್ ಪೂರೈಕೆ ಆಗಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ಬೇಸಿಕ್ ಟ್ರೀಟ್ಮೆಂಟ್ ಮಾತ್ರ ನೀಡುತ್ತಿದ್ದು, ರೋಗಿ ಸಂಬಂಧಿಕರಿಗೆ ಆಕ್ಸಿಜನ್ ಸಿಲಿಂಡರ್ ಹೊಂದಿಸಿ ಎನ್ನುವ ಪರಿಸ್ಥಿತಿ ಬಂದಿದೆ ಎಂದು ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ನಡೆಸಿದ್ದ ವೈದ್ಯ ಡಾ. ಅಮಿತ್ ಭಾತೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಎಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ಇಂಜೆಕ್ಷನ್ ಕೊರತೆಯಿದೆ. ಸ್ಯಾಚೂರೇಷನ್ 80ಕ್ಕಿಂತ ಕೆಳಗೆ ಇದ್ದರೆ ಅಡ್ಮಿಟ್ ಮಾಡಿಕೊಳ್ಳುವ ಧೈರ್ಯ ಮಾಡ್ತಿಲ್ಲ. ರೋಗಿ ಸಂಬಂಧಿಕರಿಗೆ ಆಕ್ಸಿಜನ್ ಸಿಲಿಂಡರ್ ಅರೇಂಜ್ ಮಾಡಿ ಅನ್ನುವ ಪರಿಸ್ಥಿತಿ ಬಂದಿದೆ. ಆಕ್ಸಿಜನ್ ಇಲ್ಲ ಅಂದ್ರೆ ಆಸ್ಪತ್ರೆ ನಡೆಸುವುದು ಸಾಧ್ಯವೇ ಇಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಎಲ್ಲ ಖಾಸಗಿ ಆಸ್ಪತ್ರೆಗಳು ಬಂದ್ ಆಗಬಹುದು. ಸರ್ಕಾರ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ಮೊದಲ ಮತ್ತು 2ನೇ ಅಲೆಗಿರುವ ವ್ಯತ್ಯಾಸ:
2ನೇ ಅಲೆಯಲ್ಲಿ ಯುವ ಜನಾಂಗ, ಮಕ್ಕಳಲ್ಲಿ ಹೆಚ್ಚಾಗಿ ಸೋಂಕು ಕಂಡು ಬರುತ್ತಿದೆ. ಮೊದಲನೇ ಅಲೆಯಲ್ಲಿ ನಮಗೆ ಆಕ್ಸಿಜನ್, ರೆಮ್ಡೆಸಿವಿರ್ ಎಲ್ಲವೂ ಹೆಚ್ಚಿನ ಪ್ರಮಾಣದಲ್ಲಿತ್ತು. ಹೀಗಾಗಿ ರೋಗಿಗಳು ಬೇಗ ಗುಣಮುಖರಾಗುತ್ತಿದ್ದರು. ಇದೀಗ 2ನೇ ಅಲೆ ರೂಪಾಂತರ ಕೊರೊನಾ ವೈರಸ್ ಆಗಿದ್ದರಿಂದ ಗುಣಮುಖರಾದವರು ಮತ್ತೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದಲ್ಲದೇ ಯುವಕರಲ್ಲಯೂ ಬಹಳಷ್ಟು ಜನರಿಗೆ ಸೋಂಕು ದೃಢಪಡುತ್ತಿದೆ. ಇದರಿಂದ ಆಕ್ಸಿಜನ್, ಇಂಜೆಕ್ಷನ್, ಬೆಡ್ ಸಮಸ್ಯೆ ಎದುರಾಗುತ್ತಿದೆ.
ಮುಂಬರುವ 15 ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಬಹದು. ಆ ಸಮಯದಲ್ಲಿ ಸಾವಿನ ಪ್ರಮಾಣ ನಿಯಂತ್ರಿಸಲು ಕಷ್ಟವಾಗಲಿದೆ. ಹೀಗಾಗಿ ಕೊರೊನಾ 2ನೇ ಅಲೆ ತನ್ನ ಹಂತಕ್ಕೆ ತಲುಪುವ ಮುಂಚೆಯೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದರು.