ಚಿಕ್ಕೋಡಿ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕೃಷ್ಣಾ ಕಣಿವೆಯ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎಂದು ಹೇಳಲಾಗುತ್ತಿದೆ.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಮಾಲೀಕತ್ವದ ಅಥಣಿ ಶುಗರ್ಸ್ ಕಬ್ಬಿನ ಕಾರ್ಖಾನೆಯಲ್ಲಿ ಉಪಹಾರ ಸೇವಿಸಿದ ಬಳಿಕ, ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಮಹೇಶ್ ಕಮಠಳ್ಳಿ ಹಾಗೂ ಶ್ರೀಮಂತ ಪಾಟೀಲ್ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದರು.
ತಮ್ಮ ಸರ್ಕಾರಿ ವಾಹನ ಬಿಟ್ಟು ಡಿಕೆಶಿ ಅವರಿದ್ದ ವಾಹನ ಹತ್ತಿದ ಸತೀಶ್ ಜಾರಕಿಹೊಳಿ ಹಾಗೂ ಮೂವರು ಶಾಸಕರು ಒಂದೇ ಕಾರಿನಲ್ಲಿ ಕುಳಿತು ಅಥಣಿಯತ್ತ ಪ್ರಯಾಣ ಬೆಳೆಸಿದ್ದು ತೀವ್ರ ಕುತೂಹಲ ಮೂಡಿಸಿದೆ.
ಸಮ್ಮಿಶ್ರ ಸರ್ಕಾರದ ಸಂಪುಟದಿಂದ ಕೈಬಿಟ್ಟ ಬಳಿಕ ತಮ್ಮ ಬೆಂಬಲಿಗರೊಂದಿಗೆ ಇನ್ನೊಂದು ಪಕ್ಷ ಸೇರ್ಪಡೆಯ ಸುಳಿವು ನೀಡುತ್ತಾ, ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಹೆಣೆಯಲು ಜಿಲ್ಲೆಯಲ್ಲಿ ಒಗ್ಗಟ್ಟಿನ ಬಲ ಪ್ರದರ್ಶಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.