ಬೆಳಗಾವಿ: ರಾಜ್ಯ ವಿಧಾನಭೆ ಉಪಾಧ್ಯಕ್ಷ ಆನಂದ್ ಮಾಮನಿ ಪಾರ್ಥಿವ ಶರೀರದ ಮುಂಭಾಗ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸರು ಗೌರವ ಸಲ್ಲಿಸಿದರು. ಬಳಿಕ ಆನಂದ್ ಮಾಮನಿ ಪತ್ನಿ ರತ್ನಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ರಾಷ್ಟ್ರ ಧ್ವಜ ನೀಡಿದರು.
ಸವದತ್ತಿ ಪಟ್ಟಣದ ರಾಮಾಪುರ ಸೈಟ್ನಲ್ಲಿರುವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಆನಂದ್ ಮಾಮನಿ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿದ್ದು, ಸವದತ್ತಿ ಪಟ್ಟಣದ ಎಸ್ಎಲ್ಎಓ ಕ್ರಾಸ್, ಗಾಂಧಿ ಚೌಕ್, ಆನೆ ಅಗಸಿ, ಬಂಡಿ ಓಣಿ, ಆನಂದಗೇರಿ ಓಣಿ, ಶಿವಾಜಿ ಸರ್ಕಲ್ ಬಳಿ ಸಾಗಿ, ಬಳಿಕ ಯಂಡ್ರಾವಿಯ ಚಂದ್ರಮಾ ಫಾರ್ಮಹೌಸ್ನಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ: ಬೆಳಗಾವಿ: ಗಣ್ಯರು, ಸಾರ್ವಜನಿಕರಿಂದ ಆನಂದ ಮಾಮನಿ ಅಂತಿಮ ದರ್ಶನ
ಈ ವೇಳೆ ಸಂತಾಪದ ನುಡಿಗಳನ್ನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಆನಂದ್ ಮಾಮನಿ ಬಹಳ ಕ್ರಿಯಾಶೀಲರಾಗಿದ್ದರು. ಆದ್ರೆ ವಿಧಿಯ ಆಟ ಬೇರೆಯದ್ದೇ ಆಗಿದೆ. ಅವರು ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿ ನೀಡಿದ್ದರು. ಆಗಸ್ಟ್ 25ರಂದು ನನ್ನನ್ನು ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದರು. ಅಂದೇ ಆರೋಗ್ಯ ವಿಚಾರಿಸಿದ್ದೆ. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು, ನಾನು ಸಿಎಂ ಆದಮೇಲೆ ಬಹಳ ಸಂತೋಷ ಪಟ್ಟಿದ್ದರು. ಅವರಿಗೆ ನಮ್ಮ ಕುಟುಂಬದ ಜೊತೆ, ತಂದೆ ಜೊತೆ ಉತ್ತಮ ಒಡನಾಟವಿತ್ತು. ಈ ಭಾಗದಲ್ಲಿ ಮತ್ತೊಂದು ಸಕ್ಕರೆ ಕಾರ್ಖಾನೆ ಮಾಡಬೇಕು ಎಂಬ ಆಸೆ ಇತ್ತು. ಅವರ ಆಸೆಯನ್ನು ಈ ಭಾಗದ ನಾಯಕರು ಮಾಡಬೇಕು. ಆನಂದ್ ಮಾಮನಿ ಅಗಲಿಕೆ ನನಗೆ ವೈಯಕ್ತಿಕವಾಗಿ ತುಂಬಾ ದೊಡ್ಡ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದರು.
ಇದನ್ನೂ ಓದಿ: ಆನಂದ್ ಮಾಮನಿ ನಿಧನಕ್ಕೆ ಸಂತಾಪ ಸೂಚಿಸಿದ ಜೋಶಿ, ಶೆಟ್ಟರ್, ಹೊರಟ್ಟಿ