ಬೆಳಗಾವಿ: ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್ಗಳ ಮೂಲಕ ರೈತರಿಗೆ ₹15,300 ಕೋಟಿ ಸಾಲವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನೇತೃತ್ವದಲ್ಲಿ ಕೊರೊನಾ-ಆತ್ಮನಿರ್ಭರ ಭಾರತ ಸಹಕಾರ ಸಂಸ್ಥೆಗಳು ಎಂಬ ಧ್ಯೇಯದೊಂದಿಗೆ ಜಿಲ್ಲಾ ಹಾಲು ಒಕ್ಕೂಟದ ಡೇರಿ ಆವರಣದಲ್ಲಿ ಬುಧವಾರ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಅವರು ಮಾತನಾಡಿದರು.
ಆತ್ಮನಿರ್ಭರ ಯೋಜನೆಯಡಿ ₹630 ಕೋಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಸಣ್ಣ ರೈತರು ಸೇರಿದಂತೆ ಲಾಕ್ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ ಎಲ್ಲರಿಗೂ ಸಾಲ ಸೌಲಭ್ಯ ನೀಡಲಾಗುವುದು. ನಾಲ್ಕು ವಿಭಾಗಗಳ ಮೂಲಕ ಸಾಲ-ಸೌಲಭ್ಯ ವಿತರಿಸಲಾಗುವುದು.
ರೈತರ ಅನುಕೂಲಕ್ಕಾಗಿ ಕೆಎಂಎಫ್ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ರಾಜ್ಯದ ಎಲ್ಲಾ 14 ಯೂನಿಯನ್ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಬೆಳಗಾವಿಯಲ್ಲಿ ಮೆಗಾ ಡೇರಿ ನಿರ್ಮಾಣ : ಬೆಳಗಾವಿ ನೂರು ಎಕರೆಯಲ್ಲಿ ಮೆಗಾ ಡೇರಿ ನಿರ್ಮಿಸುವುದು ಬಾಲಚಂದ್ರ ಜಾರಕಿಹೊಳಿ ಅವರ ಕನಸು. ಇದರಿಂದ ಈ ಭಾಗದ ನೂರಾರು ಜನರಿಗೆ ಉದ್ಯೋಗ ಲಭಿಸುವುದರ ಜತೆಗೆ ಹೈನುಗಾರಿಕೆ ಉದ್ಯಮ ಪ್ರಗತಿಯಾಗಲಿದೆ. ಶೀಘ್ರದಲ್ಲೇ ಮೆಗಾ ಡೇರಿ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂದು ಸಚಿವರು ಹೇಳಿದರು.