ಬೆಳಗಾವಿ: ಶೀಘ್ರದಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿಯ ಸಂಬಳ ಪಾವತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 30 ಸಾವಿರ ಸಾರಿಗೆ ಸಿಬ್ಬಂದಿ ಇದ್ದಾರೆ. ಅವರಿಗೆ ಪ್ರತಿ ತಿಂಗಳು 325 ಕೋಟಿ ರೂ. ಸಂಬಳ ನೀಡಬೇಕಾಗುತ್ತದೆ. ಆದ್ರೆ ಕೊರೊನಾ ಬಂದ ಮೇಲೆ ಸಾರಿಗೆ ಇಲಾಖೆಗೆ ಅತಿ ಹೆಚ್ಚು ನಷ್ಟವಾಗಿದ್ದು, ದೇಶದಲ್ಲಿ ಲಾಕ್ಡೌನ್ ವೇಳೆ ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ತು. ಆಗ ಸರ್ಕಾರದಿಂದ ಹಣ ಪಡೆದುಕೊಂಡು ನಮ್ಮ ಇಲಾಖೆ ಸಿಬ್ಬಂದಿಗೆ ಎರಡು ತಿಂಗಳು ಸೇರಿ ಒಟ್ಟು ಆರು ತಿಂಗಳ ಸಂಬಳ ನೀಡಲಾಗಿದೆ.
ಸದ್ಯ ಲಾಕ್ಡೌನ್ ಅವಧಿ ಮುಗಿದರೂ ಸಾರ್ವಜನಿಕರು ಕಡಿಮೆ ಪ್ರಮಾಣದಲ್ಲಿ ಬಸ್ ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ ಬಸ್ಗಳಿಂದ ಬರುವ ಆದಾಯ ಬರೀ ಡೀಸೆಲ್ಗೆ ಸೀಮಿತವಾಗಿದೆ. ಇದರಿಂದಾಗಿ ಇಲಾಖೆ ಸಿಬ್ಬಂದಿಗೆ ಸಂಬಳ ನೀಡುವುದು ಸ್ವಲ್ಪ ಮಟ್ಟಿಗೆ ವ್ಯತ್ಯಾಸವಾಗಿದೆ. ಆದ್ರೆ ಸಿಬ್ಬಂದಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದೇನೆ. ಸಿಬ್ಬಂದಿಗೆ ಸಂಬಳ ನೀಡಲು ಕ್ರಮ ಕೈಗೊಳ್ಳಲಾವುದು ಎಂದು ತಿಳಿಸಿದ್ರು.