ಬೆಳಗಾವಿ : ಕೌಟುಂಬಿಕ ಕಲಹದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ. ಈ ಮಹಿಳೆಯ ಸಾವಿಗೆ ಸೊಸೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸ್ವತಃ ಮೃತ ಮಹಿಳೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಬೈಲಹೊಂಗಲ ಪಟ್ಟಣದ ಮಹೆಬೂಬಿ ಯಾಕೂಶಿ (53) ಎಂಬವರು ನಿನ್ನೆ(ಮಂಗಳವಾರ) ಮೃತಪಟ್ಟಿದ್ದರು. ಈ ಸಂಬಂಧ ಸೊಸೆ ಮೆಹರೂನಿ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸುಬಾನ್ ಯಾಕೂಶಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸುಬಾನ್ ಮತ್ತು ಮೆಹರೂನಿ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಮೆಹರೂನಿ ಸುಬಾನ್ಗೆ ಬೇರೆ ಮನೆ ಮಾಡುವಂತೆ ಪೀಡಿಸುತ್ತಿದ್ದರಂತೆ. ಬೇರೆ ಮನೆ ಮಾಡಲು ನಿರಾಕರಿಸಿದ್ದಕ್ಕೆ ಮೆಹರೂನಿ ತನ್ನ ತವರು ಮನೆಯವರನ್ನು ಕರೆಸಿ ಪತಿ ಮತ್ತು ಅತ್ತೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಅತ್ತೆ ಗಾಯಗೊಂಡಿದ್ದರು ಎಂದು ಹೇಳಲಾಗಿದೆ.
ಗಾಯಗೊಂಡಿದ್ದ ಮಹೆಬೂಬಿಯನ್ನು ಮೇ 22ರಂದು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜೂನ್ 1ರಂದು ಮಹೆಬೂಬಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆ ನಂತರ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಮಹೆಬೂಬಿ ನಿನ್ನೆ ಕೊನೆಯುಸಿರೆಳೆದಿದ್ದು, ಲೋ ಬಿಪಿ ಇಲ್ಲವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಮತ್ತೊಂದೆಡೆ ಸೊಸೆ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ದೂರು ದಾಖಲಾಗಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆ ವರದಿಯ ನಿರೀಕ್ಷೆಯಲ್ಲಿದ್ದಾರೆ. ಮರಣೋತ್ತರ ವರದಿ ಬಂದ ಬಳಿಕ ಕೊಲೆ ರಹಸ್ಯ ಬಹಿರಂಗವಾಗಲಿದೆ.
ಬೆಂಗಳೂರಿನಲ್ಲಿ ವ್ಯಕ್ತಿಯಿಂದ ಅತ್ತೆಗೆ ಚಾಕು ಇರಿತ : ತವರಿಗೆ ತೆರಳಿದ್ದ ಹೆಂಡತಿಯನ್ನು ವಾಪಸ್ ಕಳುಹಿಸದ ಹಿನ್ನಲೆ ಆಕ್ರೋಶಗೊಂಡ ಪತಿ ಅತ್ತೆಗೆ ಚಾಕುವಿನಿಂದ ಇರಿದಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೀತಾ ಎಂಬುವವರು ಹಲ್ಲೆಗೊಳಗಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೋಲಾರ ವೇಮಗಲ್ ಮೂಲದ ಮನೋಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗಂಡನ ಕಾಟಕ್ಕೆ ಬೇಸತ್ತು ಮನೋಜ್ ಪತ್ನಿ ವರ್ಷಿತಾ ತವರು ಮನೆಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಕಳೆದ ಮೂರು ವರ್ಷಗಳ ಹಿಂದೆ ಮನೋಜ್ ಮಂಡ್ಯ ಮೂಲದ ಹರ್ಷಿತಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದ ದಂಪತಿಗಳು ಬೆಳ್ಳಂದೂರು ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೊದಲಿಗೆ ಎಲ್ಲವೂ ಸರಿಯಾಗಿಯೇ ಇತ್ತು. ಇಬ್ಬರು ದುಡಿದು ಸಂಸಾರ ನಡೆಸುತ್ತಿದ್ದರು. ಕ್ರಮೇಣ ಮನೋಜ್ ಕುಡಿತಕ್ಕೆ ದಾಸನಾಗಿದ್ದ ಎಂದು ಹೇಳಲಾಗಿದೆ. ವರ್ಷಿತಾ ಎಷ್ಟೇ ಬುದ್ಧಿವಾದ ಹೇಳಿದರೂ ಮನೋಜ್ ಮಾತ್ರ ಕ್ಯಾರೇ ಅನ್ನುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಇದರಿಂದ ಬೇಸತ್ತ ವರ್ಷಿತಾ ತನ್ನ ತವರು ಮನೆಗೆ ತೆರಳಿದ್ದಳು. ಬಳಿಕ ಆರು ತಿಂಗಳು ಕಳೆದರೂ ವಾಪಸ್ ಆಗಿರಲಿಲ್ಲ. ಮನೋಜ್ ಕರೆಗೆ ಪ್ರತಿಕ್ರಿಯಿಸಿದ್ದ ಅತ್ತೆ, ಅವಳು ನಿನ್ನ ಜೊತೆ ಬರುವುದಿಲ್ಲ, ಕರೆ ಮಾಡುವುದಾಗಲೀ, ಮೆಸೇಜ್ ಮಾಡುವುದಾಗಲೀ ಮಾಡಬೇಡ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಮನೋಜ್ ಜೂನ್ 8ರಂದು ಅತ್ತೆಗೆ ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅತ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ವರ್ಷಿತಾ, ಗಂಡನ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಪತ್ನಿ, ಮೂವರು ಹೆಣ್ಣುಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!