ಬೆಳಗಾವಿ: ಕೊರೊನಾ... ಕೊರೊನಾ... ಸದ್ಯ ಪ್ರಪಂಚವನ್ನು ಎರಡ್ಮೂರು ತಿಂಗಳಿನಿಂದ ಹಿಂಡಿ ಹಿಪ್ಪೆ ಮಾಡುತ್ತಿರುವ ಮಹಾ ಕ್ರೂರಿ ವೈರಸ್ ಇದು. ಆರ್ಥಿಕತೆಯನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿರುವ ಈ ಮಹಾಮಾರಿ ಎಲ್ಲರನ್ನು ಭೀತಿಗೆ ದೂಡಿದೆ. ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರೂ ತನ್ನ ಕಬಂದಬಾಹು ವಿಸ್ತರಿಸುತ್ತಲೇ ಇದೆ. ಇತ್ತ ರಾಜ್ಯದ ಅತಿ ಹಳೇಯದಾದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸೋಂಕು ಹರಡದಂತೆ ಎಲ್ಲಾ ರೀತಿಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಸಾವಿರಕ್ಕೂ ಅಧಿಕ ಕೈದಿಗಳ ಸಾಮರ್ಥ್ಯವನ್ನು ಹಿಂಡಲಗಾ ಕೇಂದ್ರ ಕಾರಾಗೃಹ ಹೊಂದಿದೆ. ವಿವಿಧ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಬರುವ ಹೊಸ ಆರೋಪಿತರಿಗೆ ಕ್ವಾರಂಟೈನ್ ಮಾಡಲಾಗುತ್ತಿದೆ. ಇದಕ್ಕಾಗಿ ಜೈಲಿನಲ್ಲಿ ಎರಡು ಪ್ರತ್ಯೇಕ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ.
ಆರೋಗ್ಯ ತಪಾಸಣೆ ಕಡ್ಡಾಯ
ಕೋವಿಡ್-19 ಸೋಂಕು ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮಗಳನ್ನ ಇಲ್ಲಿ ಪಾಲಿಸಲಾಗುತ್ತಿದ್ದು, ವಾರಕ್ಕೊಮ್ಮೆ ಕೈದಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಂಧಿತರಾಗುವ ಆರೋಪಿಗಳನ್ನು ನೇರವಾಗಿ ಜೈಲಿಗೆ ಸೇರಿಸಿಕೊಳ್ಳುತ್ತಿಲ್ಲ. ಮೊದಲು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗುತ್ತದೆ. ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ ಮಾತ್ರ ಜೈಲಿಗೆ ಪ್ರವೇಶ ಮತ್ತು ಆರೋಗ್ಯ ತಪಾಸಣೆಯ ಪತ್ರ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ.
ಜೈಲಿನಲ್ಲಿದ್ದಾರೆ 884 ಕೈದಿಗಳು!
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸದ್ಯ 889 ಕೈದಿಗಳಿದ್ದಾರೆ. ಭೂಗತ ಪಾತಕಿ ಬನ್ನಂಜೆ ರಾಜಾ, ದಂಡುಪಾಳ್ಯ ಗ್ಯಾಂಗ್‍ನ ಸದಸ್ಯರು, ವಿಕೃತ ಕಾಮಿ ಉಮೇಶ್ ರೆಡ್ಡಿ, ರವಿ ಪೂಜಾರಿ ಸಹಚರರು ಸೇರಿದಂತೆ ಘಟಾನುಘಟಿ ಕೈದಿಗಳು ಜೈಲಿನಲ್ಲಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ 84 ಕೈದಿಗಳನ್ನು ತಾತ್ಕಾಲಿಕವಾಗಿ ಪೆರೋಲ್ ಮೇಲೆ ಬಿಡುಗಡೆಗೊಳಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಮತ್ತೆ ಜೈಲಿಗೆ ವಾಪಸ್ ಆಗಲಿದ್ದಾರೆ.