ಬೆಳಗಾವಿ: ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಕೋವಿಡ್ ಉಲ್ಭಣಗೊಳ್ಳುತ್ತಿದೆ. ಹಾಗಾಗಿ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜನತಾ ಕರ್ಫ್ಯೂ, ಇದೀಗ ಲಾಕ್ಡೌನ್ ಜಾರಿಗೊಳಿಸಿದೆ. ಕೆಲ ಕ್ಷೇತ್ರಗಳ ಕಾರ್ಯಚಟುವಟಿಕೆಗೆ ಲಾಕ್ಡೌನ್ನಿಂದ ವಿನಾಯಿತಿ ಇದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿವಿಧ ಇಲಾಖೆಯ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿವೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳು, ರಸ್ತೆಗಳ ನಿರ್ಮಾಣ, ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ, ಮೇಲ್ಸೆತುವೆ ನಿರ್ಮಾಣ, ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಅಂಗನವಾಡಿಗಳ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಜತೆಗೆ ಕೋವಿಡ್ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಅಚ್ಚುಕಟ್ಟಾಗಿ ಪಾಲಿಸಲಾಗುತ್ತಿದೆ. ಪ್ರತಿ ಕಾರ್ಮಿಕರಿಗೆ ಮಾಸ್ಕ್ ವಿತರಿಸಲಾಗಿದೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
ಲಾಕ್ಡೌನ್ ಜಾರಿಯಿದ್ದರೂ ಕಾರ್ಮಿಕರು ಲಭ್ಯ:
ಕೋವಿಡ್ ಭೀತಿ, ಕರ್ಫ್ಯೂ-ಲಾಕ್ಡೌನ್ ಜಾರಿ ಹಿನ್ನೆಲೆ ಬಹುತೇಕ ಕಡೆಗಳಲ್ಲಿ ಕಾರ್ಮಿಕರು ತವರಿಗೆ ತೆರಳಿದ್ದಾರೆ. ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುತ್ತಿಗೆಯನ್ನು ಸ್ಥಳೀಯರೇ ಪಡೆದಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರವೇ ಅನುಮತಿ ನೀಡಿದೆ. ಹೀಗಾಗಿ ಗುತ್ತಿಗೆದಾರರು ಸ್ಥಳೀಯವಾಗಿ ಕಾರ್ಮಿಕರನ್ನು ಬಳಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.
ಜಿಲ್ಲೆಯ ಕಿತ್ತೂರು, ಬೈಲಹೊಂಗಲ, ರಾಮದುರ್ಗ, ಚಿಕ್ಕೋಡಿ, ಬೆಳಗಾವಿ ಗ್ರಾಮೀಣ, ಹುಕ್ಕೇರಿ, ಅಥಣಿ ಹೀಗೆ ಬಹುತೇಕ ತಾಲೂಕುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕೆಲ ಗುತ್ತಿಗೆದಾರರಿಗೆ ಅಗತ್ಯಕ್ಕೆ ತಕ್ಕಷ್ಟು ಕಾರ್ಮಿಕರ ಲಭ್ಯತೆ ಇದ್ದು, ತ್ವರಿತವಾಗಿ ಕಾಮಗಾರಿ ಕೈಗೊಂಡಿದ್ದಾರೆ. ಆದರೆ ಕೆಲ ಗುತ್ತಿಗೆದಾರರಿಗೆ ಕಾರ್ಮಿಕರ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ಕೆಲವೆಡೆ ಕೆಲಸಗಳು ಆಮೆಗತಿಯಲ್ಲಿ ನಡೆದಿವೆ.
ಸಂಚಾರಕ್ಕೆ ನಿರ್ಬಂಧ-ಕಾಮಗಾರಿ ಸುಗಮ:
ಅಗತ್ಯ ಸೇವೆಯ ವಾಹನಗಳನ್ನು ಹೊರತುಪಡಿಸಿದ್ರೆ ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ವಾಹನ ಕಿರಿಕಿರಿ ತಪ್ಪಿದೆ. ಅಲ್ಲದೇ ಕಾಮಗಾರಿ ತ್ವರಿತವಾಗಿ ನಡೆಯಲು ಇದು ಕೂಡ ನೆರವಾಗಿದೆ.
ಕಳೆದ 15 ದಿನಗಳಿಂದ ಸಾರ್ವಜನಿಕ ಸಾರಿಗೆ ಸಂಚಾರ ಆಗುತ್ತಿಲ್ಲ. ಅಲ್ಲದೇ ಖಾಸಗಿ ವಾಹನಗಳು ಕೂಡ ಅನಗತ್ಯವಾಗಿ ಓಡಾಡುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ತೊಂದರೆ ಆಗುತ್ತಿಲ್ಲ.
ಇದನ್ನೂ ಓದಿ: ಬೆಳಗಾವಿಗೆ 32KL ಹೆಚ್ಚುವರಿ ಆಕ್ಸಿಜನ್ ನೀಡುವಂತೆ ಸಿಎಂಗೆ ಜಿಲ್ಲಾಧಿಕಾರಿ ಮನವಿ
ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ತೋರವಿ, ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಾಮಗಾರಿ ವೇಳೆ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. ಕಾರ್ಮಿಕರ ಕೊರತೆ ಆಗಿಲ್ಲ ಎಂದು ಮಾಹಿತಿ ನೀಡಿದರು.