ಬೆಳಗಾವಿ: ಕರ್ನಾಟಕದಲ್ಲಿ ಯುವ ವಿರೋಧಿ, ಭ್ರಷ್ಟ, ಜನ ವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು. ಇದಕ್ಕಾಗಿ ಎಲ್ಲರೂ ಶಪಥ ಮಾಡಬೇಕು. ಸಾಮಾಜಿಕ ಬದಲಾವಣೆ ಆಗಲು ಯುವಕ, ಯುವತಿಯರಿಂದ ಮಾತ್ರ ಸಾಧ್ಯ. ಹಾಗಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮತದಾನದ ಅವಧಿಯನ್ನು 18 ವಯಸ್ಸಿಗೆ ಇಳಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಇಲ್ಲಿ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಯವರು 9 ವರ್ಷದಲ್ಲಿ ಯುವಕರಿಗಾಗಿ ಏನು ಮಾಡಿದರು? ಚುನಾವಣೆ ಬಂದಾಗ ಮಾತ್ರ ಕರ್ನಾಟಕಕ್ಕೆ ಮೋದಿ ಬರ್ತಾರೆ, ಪ್ರವಾಹ, ಕೋವಿಡ್ ಬಂದಾಗ ಮೋದಿಯವರು ಕರ್ನಾಟಕದ ಕಡೆ ತಿರುಗಿಯೂ ನೋಡಲಿಲ್ಲ. ಈಗ ಪದೇ ಪದೆ ರಾಜ್ಯಕ್ಕೆ ಬರ್ತಿದ್ದಾರೆ. ಭ್ರಷ್ಟ ಬಿಜೆಪಿಯವರು ಮೋದಿ ಮೂಲಕ ಮತ ಪಡೆಯಲು ಮುಂದಾಗಿದ್ದಾರೆ ಎಂದು ಕುಟುಕಿದರು.
2014 ರ ಚುನಾವಣೆಯಲ್ಲಿ ಬಿಜೆಪಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿತ್ತು. ಆದರೆ, ಇದ್ದ ಉದ್ಯೋಗ ಕೂಡ ಕಡಿತ ಮಾಡಿದ್ದಾರೆ. ಇದರಿಂದ ಯುವಕರು ಬೀದಿ ಪಾಲಾಗಿದ್ದಾರೆ. ಕೆಲಸವಿಲ್ಲದೆ ಯುವಕರು ಬೇರೆ ದೇಶಗಳಿಗೆ ವಲಸೆ ಹೋಗುವಂತಾಗಿದೆ. ಮೋದಿ ಕರ್ನಾಟಕಕ್ಕೆ ಬಂದಾಗ, ಸಮಸ್ಯೆಯ ಬಗ್ಗೆ ಮಾತಾಡದೇ ಭಾವನಾತ್ಮಕ ವಿಚಾರ ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿರುವುದು 40% ಸರ್ಕಾರ. ಎಲ್ಲಾ ಇಲಾಖೆಯಲ್ಲಿ ಲಂಚ ಇಲ್ಲದೆ ಉದ್ಯೋಗ ಸಿಗುತ್ತಿಲ್ಲ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಆಗಬೇಕಾದರೆ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ, ಹೊಸ ಶಿಕ್ಷಣ ಜಾರಿಗೆ ತರುವುದಾಗಿ ಹೇಳಿ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ, ಬಿಜೆಪಿ ಸರ್ಕಾರ ಕಿೊತ್ತೊಗೆಯಬೇಕು ಎಂದು ಬಿಜೆಪಿ ವಿರುದ್ಧ ಗುಡುಗಿದರು.
ನಿರುದ್ಯೋಗಿಗಳಿಗೆ ಕೆಲಸದ ಭರವಸೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ವೇಳೆ ಗಾಂಧೀಜಿ ಅವರು ಎಲ್ಲಿ ನಾಯಕತ್ವ ವಹಿಸಿದ್ದರೋ, ಅದೇ ಜಾಗದಲ್ಲಿ ರಾಹುಲ್ ಗಾಂಧಿ ಅವರು ಸಮಾವೇಶ ಮಾಡುತ್ತಿದ್ದಾರೆ. ರಾಜ್ಯ ಚುನಾವಣೆಯಲ್ಲಿ ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ. ಇದೊಂದು ಐತಿಹಾಸಿಕ ಸಭೆಯಾಗಿದೆ. ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಕೆಲಸ ಮಾಡ್ತೇವೆ ಎಂದು ಹೇಳಿದರು.
ವರ್ಷದಲ್ಲಿ 2.5 ಲಕ್ಷ ಸರ್ಕಾರಿ, 10 ಲಕ್ಷ ಖಾಸಗಿ ಹುದ್ದೆಗಳನ್ನು ನೀಡಲಾಗುವುದು. ಯುವಕರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಖಾಸಗಿ ವಲಯದಲ್ಲಿಯೂ ಉದ್ಯೋಗ ವಿನಿಮಯ ಕಚೇರಿ ಆರಂಭಿಸಿ, ಅದರ ಮೂಲಕ ಉದ್ಯೋಗ ಕಲ್ಪಿಸುತ್ತೇವೆ. ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ಕೊಡುವ ಸಂಕಲ್ಪ ನಮ್ಮದು. 140 ಸೀಟು ಗೆದ್ದು ಅಧಿಕಾರಕ್ಕೆ ಬರ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ ಮಾತನಾಡಿ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ವ್ಯಾಪಕ ಬೆಂಬಲ ಸಿಕ್ಕಿತು. ಬಿಜೆಪಿಯಿಂದ ಆಗುತ್ತಿರುವ ಅನ್ಯಾಯವನ್ನು ಯುವ ಸಮೂಹ ಹೇಳಿಕೊಂಡಿದೆ. ಬಿಜೆಪಿ ಅಂದ್ರೆ ಬೆಲೆ ಏರಿಕೆ, ನಲವತ್ತು ಪರ್ಸೆಂಟೇಜ್, ಭ್ರಷ್ಟಾಚಾರ ಪಕ್ಷವಾಗಿದೆ. ನರೇಂದ್ರ ಮೋದಿ ಅವರು ಬರೀ ಸುಳ್ಳು ಹೇಳ್ತಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ 40% ಸರ್ಕಾರ: ರಾಜ್ಯದ ಯುವಕರು ನಮಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಉದ್ಯೋಗ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಲಕ್ಷಾಂತರ ಯುವಕರು ನಮ್ಮ ಬಳಿ ನಿರುದ್ಯೋಗದ ಬಗ್ಗೆ ಹೇಳಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ದೇಶದಲ್ಲೇ ಭ್ರಷ್ಟ ಸರ್ಕಾರವಾಗಿದೆ. ಕೆಲಸಗಳು ಆಗಬೇಕಾದರೆ 40% ನೀಡಬೇಕು. ಭ್ರಷ್ಟಾಚಾರ ಕುರಿತು ಪ್ರಧಾನಿಗೆ ಗುತ್ತಿಗೆದಾರರು ದೂರು ನೀಡಿದ್ದಾರೆ. ಆದರೆ, ಪ್ರಧಾನಿಗಳು ಮಾತ್ರ ಉತ್ತರ ನೀಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಓದಿ: ಕಾಂಗ್ರೆಸ್ನಿಂದ 4ನೇ ಗ್ಯಾರಂಟಿ ಘೋಷಣೆ: ನಿರುದ್ಯೋಗ ಯುವಕ, ಯುವತಿಯರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ