ಬೆಳಗಾವಿ : ಬಿಜೆಪಿಯವರೇ ದಿ ಕಾಶ್ಮೀರಿ ಫೈಲ್ ಚಿತ್ರದ ಟಿಕೆಟ್ ಮಾರಲು ಕುಳಿತರೇ ಆಶ್ಚರ್ಯವಿಲ್ಲ. ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಚಿತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ಪೀಕರ್ ಎಲ್ಲ ಶಾಸಕರನ್ನು ಚಿತ್ರ ವೀಕ್ಷಣೆಗೆ ಆಹ್ವಾನಿಸಿದ್ದಾರೆ. ಕಾಶ್ಮೀರದಲ್ಲಿ ಪಂಡಿತರ ಮೇಲೆ ದೌರ್ಜನ್ಯ ಆಗಿರಬಹುದು. ಆದರೆ, ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯದ ಚಿತ್ರ ಮಾಡುವವರು ಯಾರು ಎಂದು ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ದಲಿತರ ಮೇಲೆ ದೌರ್ಜನ್ಯಗಳಾಗಿವೆ. ಬಿಜೆಪಿಯವರು ಅವರಿಗೆ ಬೇಕಾದಂತೆ ಎಡಿಟ್ ಮಾಡುತ್ತಾರೆ. ದಲಿತರ ಹತ್ಯೆ ಆದರೆ ಬಿಜೆಪಿಯವರು ಸುಮ್ಮನೆ ಇರುತ್ತಾರೆ.
ದಲಿತರು, ಕುರುಬರು ಹಿಂದೂಗಳು ಅಲ್ವಾ? ಇವರ ಕಾರ್ಯಕರ್ತರಷ್ಟೇ ಹಿಂದೂಗಳಾ?. ದಿ ಕಾಶ್ಮೀರಿ ಫೈಲ್ಸ್ ಚಿತ್ರವನ್ನು ನಾನು ವೀಕ್ಷಿಸುತ್ತೇನೆ. ಬಳಿಕ ಚಿತ್ರದ ಬಗ್ಗೆ ಮಾತನಾಡುತ್ತೇನೆ. ದಿ ಕಾಶ್ಮೀರಿ ಫೈಲ್ಸ್ ಬಿಜೆಪಿಯ ಟ್ರೈಲರ್ ಅಷ್ಟೇ.. ಚುನಾವಣೆ ಸಮೀಪಿಸುತ್ತಿದ್ದಂತೆ ಅವರು ಏನೇನೋ ತಂತ್ರ ಮಾಡುತ್ತಾರೆ, ಕಾದು ನೋಡಿ ಅಷ್ಟೇ ಎಂದರು.
ಅಸಾದುದ್ದೀನ್ ಓವೈಸಿ ಬಿಜೆಪಿಯ ಬಿ ಟೀಂ : ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿಯ ಬಿ ಟೀಂ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ಹಿಜಾಬ್ ವಿಚಾರದಲ್ಲಿ ಅಶಾಂತಿ ಕಡದುವ ಕೆಲಸವನ್ನು ನಾವು ಮಾಡಿಲ್ಲ. ದೇಶದಲ್ಲಿ ಎ ಟೀಂ, ಬಿ ಟೀಂ ಸಾಕುತ್ತಿರುವವರೇ ಬಿಜೆಪಿಯವರು.
ರಾಷ್ಟ್ರೀಯ ಮಟ್ಟದಲ್ಲಿ ಅಸಾದುದ್ದೀನ್ ಓವೈಸಿಯನ್ನು ಸಾಕುತ್ತಿದ್ದಾರೆ. ಓವೈಸಿ ಯಾವಾಗಲೂ ಬಿಜೆಪಿ ಹಿಂದೆಯೇ ಬ್ಯಾಗ್ ಹಿಡಿದುಕೊಂಡು ಹೋಗುತ್ತಾರೆ ಎಂದು ದೂರಿದರು. ಯುಪಿಯಲ್ಲಿ ಸಮಾಜವಾದಿ ಪಕ್ಷದ 12 ಅಭ್ಯರ್ಥಿಗಳ ಸೋಲಿಗೆ ಓವೈಸಿಯೇ ಕಾರಣ.
ಮಹಾರಾಷ್ಟ್ರದಲ್ಲಿ ಓವೈಸಿ ಆಟ ನಡೆಯಿತು, ಬಂಗಾಳದಲ್ಲಿ ನಡೆಯಲಿಲ್ಲ. ಎಲ್ಲ ಕಡೆಯೂ ಅಸಾದುದ್ದೀನ್ ಓವೈಸಿ ಆಟ ನಡೆಯುವುದಿಲ್ಲ. ಕರ್ನಾಟಕದಲ್ಲಿ ಓವೈಸಿ ಪ್ರಚೋದನೆ ಮಾಡಲು ಬರುತ್ತಾರೆ. ಆದರೆ, ಓವೈಸಿ ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು. ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಅಂತಿಮ.
ಈ ತೀರ್ಪು ಒಂದೇ ಧರ್ಮದ ವಿರುದ್ಧವೇನೂ ಅಲ್ಲ. ತರಗತಿಯಲ್ಲಿ ಎಲ್ಲ ಧರ್ಮದ ಬಣ್ಣ, ವಸ್ತ್ರಗಳನ್ನು ನಿಷೇಧ ಮಾಡಿದ್ದಾರೆ. ಕೋರ್ಟ್ ಆದೇಶವನ್ನು ಎಲ್ಲರೂ ಸ್ವಾಗತಿಸುತ್ತೇವೆ. ಮೊದಲು ಬಹುತೇಕರು ತರಗತಿಯಲ್ಲಿ ಹಿಜಾಬ್ ಧರಿಸುತ್ತಿರಲಿಲ್ಲ. ಆದರೆ, ಬಿಜೆಪಿಯವರೇ ಈ ಬಗ್ಗೆ ರಾಜ್ಯದಲ್ಲಿ ಗೊಂದಲ ಉಂಟು ಮಾಡಿದರು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ವೈಯಕ್ತಿಕವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ಈ ಹಿಂದೇ ರಾಮ ಜನ್ಮಭೂಮಿ ವಿವಾದಲ್ಲೂ ಹಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ಆದೇಶವನ್ನು ಎಲ್ಲ ಸಮುದಾಯ ಒಪ್ಪಿಕೊಂಡವು. ಹಿಜಾಬ್ ವಿಚಾರದಲ್ಲಿ ವೈಯಕ್ತಿಕವಾಗಿ ಸುಪ್ರೀಂ ಮೆಟ್ಟಿಲೇರುವವರಿಗೆ ನಾವು ಬೇಡ ಎನ್ನಲು ಆಗಲ್ಲ ಎಂದರು.