ಬೆಳಗಾವಿ: ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಅಸ್ತ್ರ ಪ್ರಯೋಗಿಸುತ್ತಿರುವ ಕಾಂಗ್ರೆಸ್ ಪಕ್ಷ, ಬೆಳಗಾವಿ ಅಧಿವೇಶನದ ಎರಡನೇ ವಾರವೂ ಸಹ ರಾಜ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ಮುಗಿ ಬೀಳಲು ಸಜ್ಜಾಗಿದೆ.
ಮೊದಲ ವಾರ ಸಾಕಷ್ಟು ವಿಧದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಕಾಂಗ್ರೆಸ್ ನಾಯಕರು ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಡಿದ್ದರು. ಇಂದು ಎರಡನೇ ವಾರದ ಕಲಾಪ ಆರಂಭವಾಗಲಿದ್ದು, ಸರ್ಕಾರದ ವಿರುದ್ಧ ಶೇ 40ರಷ್ಟು ಅಕ್ರಮದ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.
ಇದನ್ನು ನಿಲುವಳಿ ಸೂಚನೆ ಮೂಲಕ ಚರ್ಚೆಗೆ ತರಲು ನಿರ್ಧರಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ಗೆ ನಿಲುವಳಿ ಸೂಚನೆ ಅಡಿ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಲಿದ್ದಾರೆ. ಇಂದು ಕಲಾಪ ಆರಂಭಕ್ಕೆ ಮುನ್ನ ಕಾಂಗ್ರೆಸ್ ಪಕ್ಷದ ಮನವಿ ಸಲ್ಲಿಕೆಯಾಗಲಿದೆ. ಚರ್ಚೆಗೆ ಒತ್ತಾಯಿಸಿ ಸ್ಪೀಕರ್ಗೆ ನೋಟಿಸ್ ನೀಡಿರುವ ಕಾಂಗ್ರೆಸ್ ಅವಕಾಶ ನೀಡುವಂತೆ ಒತ್ತಾಯಿಸಲಿದೆ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮ 60ನೇ ನಿಯಮದ ಮೇರೆಗೆ ಡಿ.26 ರಂದು ವಿಧಾನಸಭೆಯ ಅಧಿವೇಶನದಲ್ಲಿ ಪ್ರಶೋತ್ತರ ಮತ್ತು ಶೂನ್ಯವೇಳೆಯ ತರುವಾಯ ಪ್ರಸ್ತಾಪಿಸಲು ಈ ಕೆಳಕಂಡ ವಿಷಯದ ಬಗ್ಗೆ ನಿಲುವಳಿ ಸೂಚನೆಯನ್ನು ಕೊಡುತ್ತೇನೆ ಎಂದು ಸಿದ್ದರಾಮಯ್ಯ ಸ್ಪೀಕರ್ಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಪ್ರಕರಣಗಳು ತೀವ್ರಗೊಂಡು ಕುದಿಬಿಂದುವಿನ ಮಟ್ಟಕ್ಕೆ ತಲುಪಿವೆ, ಭ್ರಷ್ಟಾಚಾರದ ಹೆಚ್ಚಳದಿಂದ ರಾಜ್ಯದ ಅಭಿವೃದ್ಧಿ ಕುಂಟಿತಗೊಳ್ಳುತ್ತಿದೆ. ಕಾವೇರಿ ಜಲಾನಯುವ ಪ್ರದೇಶದ ಹೇಮಾವತಿ ನಾಲೆ, ಕೃಷ್ಣಾ ಜಲಾನಯನ ಪ್ರದೇಶದ ನಾರಾಯಣಪುರ ಬಲದಂಡೆ ಕಾಲುವೆ ರಿಪೇರಿ ಮುಂತಾದ ಕಾಮಗಾರಿಗಳಲ್ಲಿ ಶೇ.50 ಕ್ಕೂ ಹೆಚ್ಚಿನ ಪ್ರಮಾಣದ ಭ್ರಷ್ಟಾಚಾರ ನಡೆದಿದೆಯೆಂದು ದಾಖಲೆಗಳು ಸಾಕ್ಷ್ಯ ನುಡಿಯುತ್ತಿವೆ.
ರಾಜ್ಯದ ವಿವಿಧ ಕಾಮಗಾರಿಗಳನ್ನು ನಡೆಸುವ ಗುತ್ತಿಗೆದಾರರುಗಳು ಸರ್ಕಾರದ ಭ್ರಷ್ಟಾಚಾರದ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿ ಪ್ರತಿಭಟಿಸುತ್ತಲೇ ಇದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಜನರ ಬಗ್ಗೆ ನಿಯೋಗಿಸುವ ಗಂಗಾ ಕಲ್ಯಾಣ ಯೋಜನೆಯಲ್ಲೂ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿರುವ ಕಾಂಗ್ರೆಸ್ ಇದರ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿದೆ.
ಇದಲ್ಲದೇ ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಚರ್ಚೆ ನಡೆಯಬೇಕಿದ್ದು, ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವಂತೆ ಕೋರಲಿದೆ.
ಇದನ್ನೂ ಓದಿ: 2022 ನೇ ಸಾಲಿನ ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕಕ್ಕೆ ಧ್ವನಿಮತದ ಅಂಗೀಕಾರ