ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಶೆಫರ್ಡ್ಸ್ ಇಂಡಿಯಾ ರಾಷ್ಟ್ರೀಯ 9ನೇ ಮಹಾ ಸಮಾವೇಶವು ಕುರುಬ ಸಮುದಾಯ ಮತ್ತು ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಜನ ಹರಿದು ಬಂದಿದ್ದರು. ನೆಚ್ಚಿನ ನಾಯಕನ ಕಣ್ತುಂಬಿಕೊಂಡು ಜನ ಪುಳಕಿತರಾದರು.
ಹೌದು, ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಮಂಗಳವಾರ ಆಯೋಜಿಸಿದ್ದ ಶೆಫರ್ಡ್ಸ್ ಇಂಡಿಯಾ ರಾಷ್ಟ್ರೀಯ 9ನೇ ಮಹಾ ಸಮಾವೇಶವು ದಾವಣಗೆರೆಯಲ್ಲಿ ಕಳೆದ ವರ್ಷ ನಡೆದ ಸಿದ್ದರಾಮೋತ್ಸವ ನೆನಪಿಸಿತು. ಅಷ್ಟೊಂದು ಸಂಖ್ಯೆಯಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಕುರುಬ ಸಮುದಾಯದ ಲಕ್ಷಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಕಾಗಿನೆಲೆಯ ನಿಜಗುಣಾನಂದ ಸ್ವಾಮೀಜಿ ಸೇರಿ ಮತ್ತಿತರ ನಾಯಕರು ಕೂಡ ಪಾಲ್ಗೊಂಡಿದ್ದರು.
![ಶೆಫರ್ಡ್ ಇಂಡಿಯಾ ರಾಷ್ಟ್ರೀಯ 9ನೇ ಮಹಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ](https://etvbharatimages.akamaized.net/etvbharat/prod-images/03-10-2023/bgm-kurubsamavesh-news_03102023174903_0310f_1696335543_450.jpg)
ಕಾರ್ಯಕ್ರಮದಲ್ಲಿ ಆಯೋಜಕರು ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ, ಖಡ್ಗ ಹಾಗೂ ಕಿರೀಟ ತೊಡಿಸಿ, ಕಂಬಳಿ ಹೊದಿಸಿ ಸತ್ಕರಿಸಿದರು. ಬಳಿಕ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಶಿಳ್ಳೆ, ಚಪ್ಪಾಳೆಗಳು ಕಿವಿಗಡಚಿಕ್ಕಿದವು. ಜಾತಿ ವ್ಯವಸ್ಥೆ ಮೇಲೆ ನಾನು ನಂಬಿಕೆ ಇಟ್ಟಿಲ್ಲ. ಕುರುಬ ಜಾತಿಯಲ್ಲಿ ನಾನು ಹುಟ್ಟಿದ್ದೇನೆ ಅಷ್ಟೇ. ಅವಕಾಶಗಳಿಂದ ವಂಚಿತರಾದ ಜಾತಿಯವರು ಅವಕಾಶಗಳು ಪಡೆದುಕೊಳ್ಳಲು ಸಂಘಟನೆ ಶಕ್ತಿ ಬೇಕಾಗುತ್ತದೆ. ಹಾಗಾಗಿ ಜಾತಿ ಸಮಾವೇಶ ಮಾಡಿದರೆ ತಪ್ಪಲ್ಲ. ಕರ್ನಾಟಕ ಬಿಟ್ಟು ರಾಜಕೀಯವಾಗಿ ಬೇರೆ ರಾಜ್ಯಗಳಲ್ಲಿ ಸಂಘಟನೆ ಮತ್ತು ನಾಯಕತ್ವದ ಕೊರತೆಯಿಂದ ಬೆಳೆದಿಲ್ಲ. ಹಾಗಾಗಿ, ಎಲ್ಲರೂ ಸಂಘಟಿತರಾಗಬೇಕು. ನಾಯಕತ್ವ ಬೆಳೆಸಿಕೊಳ್ಳಲು ಪ್ರೀತಿ ಇರಬೇಕು. ಸಂಘಟನೆ ಬೆಳೆಸಬೇಕು. ಶೆಫರ್ಡ್ ಇಂಡಿಯಾ ಸಂಘಟನೆ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
ಕುರುಬರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬಹುತೇಕ ಎಲ್ಲ ರಾಜ್ಯಗಳಲ್ಲೂ ವಾಸವಿದ್ದಾರೆ. ಅವರೆಲ್ಲಾ ಒಂದು ವೇದಿಕೆಯಲ್ಲಿ ಸಂಘಟಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲ ಜಾತಿ, ವರ್ಗದ ಜನರು ಸಂಘಟಿತರಾಗಿ ಸಂವಿಧಾನ ಕೊಟ್ಟ ಹಕ್ಕು ಪಡೆಯಬೇಕು ಎಂದ ಸಿದ್ದರಾಮಯ್ಯ, ಸಮಾಜವಾದ ಹೇಳುತ್ತಾರೆ, ಜ್ಯಾತ್ಯಾತೀತತೆ ಪ್ರತಿಪಾದಿಸುತ್ತಾರೆ. ಆದರೆ, ಜಾತಿ ಸಮಾವೇಶಕ್ಕೆ ಹೋಗುತ್ತಾರೆ ಎಂದು ಕೆಲವರು ನನ್ನ ಬಗ್ಗೆ ಕುಹಕವಾಡುತ್ತಾರೆ. ಆದರೆ, ಯಾವ ಜಾತಿಗಳು ಅವಕಾಶಗಳಿಂದ ವಂಚಿತವಾಗಿವೆ, ಅವು ಜಾತಿಯಿಂದ ಸಂಘಟನೆಯಾದರೆ ಅದು ಜಾತಿವಾದ ಅಲ್ಲ. ಯಾವ ಜಾತಿಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರಿದವೆಯೋ ಅವು, ಜಾತಿ ಸಮಾವೇಶ ಮಾಡಿದರೆ ಅದು ಜಾತಿವಾದ ಎಂದರು.
![ಶೆಫರ್ಡ್ ಇಂಡಿಯಾ ರಾಷ್ಟ್ರೀಯ 9ನೇ ಮಹಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ](https://etvbharatimages.akamaized.net/etvbharat/prod-images/03-10-2023/bgm-kurubsamavesh-news_03102023174903_0310f_1696335543_127.jpg)
ಕಾಗಿನೆಲೆ ಗುರುಪೀಠ ಕುರುಬ ಸಮುದಾಯಕ್ಕೆ ಮಾತ್ರ ಸಿಮೀತವಲ್ಲ. ಇದು ತುಳಿತಕ್ಕೊಳಗಾದ ಎಲ್ಲ ಸಮಾಜಗಳ ಪೀಠ ಎಂದು ಎಚ್ ವಿಶ್ವನಾಥ್ ಪೀಠದ ಮೊದಲ ಕಾರ್ಯಕ್ರಮದಲ್ಲೆ ಹೇಳಿದ್ದರು. ಹಾಗಾಗಿ, ನಾನು ಜಾತಿವಾದ ಮಾಡುವ ಮಠಗಳನ್ನು ನಾನು ಬೆಂಬಲಿಸುವುದಿಲ್ಲ. ಎಲ್ಲರೂ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಬೆಳೆದರೆ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆದ್ದರಿಂದ ಎಲ್ಲರಿಗೂ ಐದು ಗ್ಯಾರಂಟಿಗಳನ್ನು ಘೋಷಿಸಿ ಜಾರಿಗೆ ತರುತ್ತಿದ್ದೇವೆ. ಹಿಂದೆ ನಾನು ಮುಖ್ಯಮಂತ್ರಿಯಿದ್ದಾಗ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟಿನ್ ಎಲ್ಲ ಯೋಜನೆಗಳು ಎಲ್ಲ ಸಮಾಜಗಳಿಗೂ ನೀಡಿದ್ದೆ. ನಾನು ಯಾವುದೇ ಕಾರಣಕ್ಕೂ ಧರ್ಮ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಉತ್ತಮ ಆಡಳಿತ ನೀಡುತ್ತೇನೆ. ಇದನ್ನು ವಿರೋಧಿಗಳು ಸಹಿಸಿಕೊಳ್ಳದಿದ್ದರೆ ಏನೂ ಮಾಡಲು ಆಗೊಲ್ಲ. ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ನಾನು ರಾಜಕೀಯದಲ್ಲಿ ಇರೋವರೆಗೂ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಆಮಿಷ ಒಡ್ಡುತ್ತಾರೆ, ದುಡ್ಡು ಕೊಡುತ್ತಾರೆ ಎಂದು ಕೆಲವರು ಆರೋಪಿಸಿ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಅದು ಆಮಿಷ ಅಲ್ಲ. ಬಡವರಿಗಾಗಿ ತಂದ ಯೋಜನೆಗಳು. ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ಜಾತಿಯವರಿಗೂ ಸಮಾನವಾಗಿ ಕುಳಿತುಕೊಳ್ಳುತ್ತಿದ್ದರು. ಶ್ರೇಣೀಕೃತ ವ್ಯವಸ್ಥೆ ಹೋಗಿ ಸಮಾನಾಂತರ ವ್ಯವಸ್ಥೆ ಬರಬೇಕು. ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಹೋರಾಟ ಮಾಡಿದ್ದರು. ಕನಕದಾಸರು ಕುಲ ಕುಲ ಎಂದು ಹೊಡೆದಾಡಬೇಡಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಹೇಳಿದ್ದರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಕಂಡಿದ್ದ ಕನಸು ನನಸಾಗಬೇಕಾದರೆ ಎಲ್ಲ ಸಮಾಜಗಳು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಮೇಲೆ ಬಂದರೆ ಮಾತ್ರ ಅದು ಸಾಕಾರವಾಗುತ್ತದೆ ಎಂದರು.
![ಶೆಫರ್ಡ್ ಇಂಡಿಯಾ ರಾಷ್ಟ್ರೀಯ 9ನೇ ಮಹಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ](https://etvbharatimages.akamaized.net/etvbharat/prod-images/03-10-2023/bgm-kurubsamavesh-news_03102023174903_0310f_1696335543_742.jpg)
ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಎರಡನೇ ರಾಜಧಾನಿ ಆಗಲು ಸಿದ್ದರಾಮಯ್ಯನವರ ಕೊಡುಗೆ ಸಾಕಷ್ಟಿದೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಅವರ ಅವಧಿಯಲ್ಲಿ ಒಟ್ಟು 30 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಇನ್ನು ಗ್ಯಾರಂಟಿ ಯೋಜನೆಗಳಿಗೆ 60 ಸಾವಿರ ಕೋಟಿ ಮೀಸಲು ಇಟ್ಟಿರುವುದರ ಉದ್ದೇಶ ಶೋಷಿತರ ಅಭಿವೃದ್ಧಿ. ಬೆಳಗಾವಿ ಜಿಲ್ಲೆಯ ಎರಡು ಲೋಕಸಭೆ ಕ್ಷೇತ್ರಗಳಿಗೆ ಒಂದರಲ್ಲಿ ಕುರುಬ ಸಮುದಾಯಕ್ಕೆ ಟಿಕೇಟ್ ಕೊಡಿಸಲು ಪ್ರಯತ್ನಿಸುತ್ತೇವೆ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಎಲ್ಲಿ ಕಿತ್ತೂರು ಚನ್ನಮ್ಮ ಇರುತ್ತಾರೋ ಅಲ್ಲಿ ಸಂಗೊಳ್ಳಿ ರಾಯಣ್ಣ ಇರುತ್ತಾರೆ. ಸ್ವಾಮಿ ನಿಷ್ಠೆಗೆ ಮತ್ತೊಂದು ಹೆಸರು ಸಂಗೊಳ್ಳಿ ರಾಯಣ್ಣ. ನನ್ನ ಲಿಂಗಾಯತ ಸಮಾಜದ ಜೊತೆಗೆ ಕುರುಬ ಸಮಾಜ ಅತ್ಯಂತ ಅವಿನಾಭಾವ ಸಂಬಂಧ ಹೊಂದಿದೆ. ನನಗೆ ನಾಲ್ಕು ಬಾರಿ ಬಿ ಫಾರ್ಮ್ ಕೊಟ್ಟು ಈ ಹಂತಕ್ಕೆ ನಾನು ಬೆಳೆಯಲು ಸಿದ್ದರಾಮಯ್ಯ ಅವರೇ ಕಾರಣ. ನನ್ನ ರಾಜಕೀಯ ಜೀವನದ ಗುರು ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮಾಜದ ಕಣ್ಮಣಿ ಅಲ್ಲ. ಇಡೀ ರಾಜ್ಯದ ಕಣ್ಮಣಿ ಎಂದು ಹಾಡಿ ಹೊಗಳಿದರು.
![ಶೆಫರ್ಡ್ ಇಂಡಿಯಾ ರಾಷ್ಟ್ರೀಯ 9ನೇ ಮಹಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ](https://etvbharatimages.akamaized.net/etvbharat/prod-images/03-10-2023/bgm-kurubsamavesh-news_03102023174903_0310f_1696335543_363.jpg)
ಕಾರ್ಯಕ್ರಮ ಉದ್ಘಾಟಿಸಿ ಹರಿಯಾಣ ರಾಜ್ಯಪಾಲ ಭಂಡಾರು ದತ್ತಾತ್ರೇಯ ಮಾತನಾಡಿದರು. ಮಾಜಿ ಸಚಿವ ಎಚ್.ಎಂ. ರೇವಣ್ಣ ಕುರುಬ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ 10 ನಿರ್ಣಯಗಳನ್ನು ವೇದಿಕೆ ಮೇಲೆ ಮಂಡಿಸಿದರು. ಶೆಫರ್ಡ್ ಇಂಡಿಯಾ ಇಂಟರನ್ಯಾಶನಲ್ ಅಧ್ಯಕ್ಷ ಎಚ್. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.
ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಅರ್ಜುನಭಾಯಿ ಸ್ವಾಮೀಜಿ, ಸಚಿವರಾದ ಆರ್.ಬಿ.ತಿಮ್ಮಾಪುರ, ಭೈರತಿ ಸುರೇಶ, ವಿಧಾನಪರಿಷತ್ ಹಿರಿಯ ಸದಸ್ಯರಾದ ಪ್ರಕಾಶ ಹುಕ್ಕೇರಿ, ಎಚ್.ವಿಶ್ವನಾಥ, ಶಾಸಕರಾದ ಎಚ್.ವೈ. ಮೇಟಿ, ಅಶೋಕ ಪಟ್ಟಣ, ಲಕ್ಷ್ಮಣ ಸವದಿ, ಆಸೀಫ್ ಸೇಠ್, ರಾಘವೇಂದ್ರ ಹಿಟ್ನಾಳ, ಭೀಮಾನಾಯಿಕ್, ಬಾಬಾಸಾಹೇಬ ಪಾಟೀಲ, ಮಹೇಂದ್ರ ತಮ್ಮನ್ನವರ ಸೇರಿ ಹೊರ ರಾಜ್ಯಗಳ ಕುರುಬ ಸಮುದಾಯದ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕಂಬಳಿ ಭರ್ಜರಿ ವ್ಯಾಪಾರ: ಸಮಾವೇಶಕ್ಕೆ ಬೆಳಗಾವಿಗೆ ಆಗಮಿಸಿದ್ದ ಜನ ಕಂಬಳಿ, ರಗ್ಗು, ಕುಲಾಯಿ, ಸ್ವೇಟರ್, ಹಗ್ಗ, ಜತ್ತಿಗೆಗಳ ಖರೀದಿಗೆ ಮುಗಿ ಬಿದ್ದಿದ್ದರು. ಸಮಾವೇಶ ಆಯೋಜಿಸಿದ್ದ ಜಿಲ್ಲಾ ಕ್ರೀಡಾಂಗಣ ಮಾರ್ಗದ ಎರಡೂ ರಸ್ತೆಗಳಲ್ಲಿ ಮಾರಾಟ ಜೋರಾಗಿತ್ತು.
ಹೊರ ರಾಜ್ಯಗಳಲ್ಲಿ ಕುರುಬ ಸಮುದಾಯ ಈಗಾಗಲೇ ಎಸ್ಟಿಗೆ ಸೇರಿವೆ. ಬೀದರ, ಕಲಬುರಗಿ ಭಾಗದ ಗೌಂಡ, ಗೊಲ್ಲ ಸಮುದಾಯಗಳು ಎಸ್ಟಿಗೆ ಸೇರಿದೆ. ಈಗ ಸಂಪೂರ್ಣವಾಗಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇನೆ. ಈ ಬಗ್ಗೆ ಕೇಂದ್ರದ ಮೇಲೆ ನಾನು ಒತ್ತಡ ಹೇರುತ್ತೇನೆ. -ಸಿದ್ದರಾಮಯ್ಯ, ಮುಖ್ಯಮಂತ್ರಿ