ಬೆಳಗಾವಿ/ಬೆಂಗಳೂರು: ಕೋವಿಡ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಂಜೆಯೊಳಗಾಗಿ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ.
ಬೆಳಗಾವಿ ಸುವರ್ಣಸೌಧದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು, ಕೋವಿಡ್ ಬಿಎಫ್ 7 ತಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಿತು. ಆತಂಕಪಡುವ ಅಗತ್ಯ ಇಲ್ಲ. ಆದರೆ, ಮಾಸ್ಕ್ ಧರಿಸುವ ಮೂಲಕ ಸರಳವಾಗಿ ಕೋವಿಡ್ ತಡೆಗಟ್ಟಬಹುದು ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ವರದಿ ಕೊಟ್ಟಿದ್ದಾರೆ. ಅದರ ಆಧಾರದಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸಿಎಂ ನಿರ್ದೇಶನ ನೀಡಿದ್ದಾರೆ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಮೂರನೇ ಡೋಸ್ನಿಂದ ಯಾವುದೇ ಅಪಾಯ ಇಲ್ಲ. ಲಸಿಕೆಯಿಂದ ಅಪಾಯ ಆಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ವರದಿ ಇಲ್ಲ. ಲಸಿಕೆ ತೆಗೆದುಕೊಳ್ಳುವ ಮೂಲಕ ರಕ್ಷಣೆ ಮಾಡಿಕೊಳ್ಳಿ ಎಂದು ಸಚಿವರು ಮನವಿ ಮಾಡಿದರು.
ಮಾಸ್ಕ್ ಧರಿಸುವ ಮೂಲಕ ಕೋವಿಡ್ ತಡೆಗಟ್ಟಬಹುದು. ಯಾವುದೇ ಆತಂಕ ಸೃಷ್ಟಿ ಬೇಡ. ಬಿಎಫ್ 7 ಯಾವುದೇ ಕ್ಷಣಕ್ಕೂ ನಮ್ಮ ರಾಜ್ಯಕ್ಕೆ ಕಾಲಿಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯ ಕ್ರಮ ಅಗತ್ಯ ಎಂದು ಹೇಳಿದರು.
ಮಾಸ್ಕ್ ಧರಿಸುವುದರಿಂದ ಕೋವಿಡ್ ತಡೆಗಟ್ಟಲು ಸಾಧ್ಯ. ಸರಳ ಕ್ರಮ ಕೈಗೊಳ್ಳುವ ಮೂಲಕ ಕೋವಿಡ್ ನಿಯಂತ್ರಣ ಮಾಡೋಣ ಎಂದು ಇದೇ ವೇಳೆ ಮನವಿ ಮಾಡಿದರು.
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಸಭೆಯಲ್ಲಿ ಹೊರಾಂಗಣ ಪ್ರದೇಶದಲ್ಲಿ ದೊಡ್ಡ ಸಮಸ್ಯೆ ಆಗಲ್ಲ. ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಸಭೆಯ ಪ್ರಮುಖ ಅಂಶಗಳು :
- ಐಎಲ್ಐ ಹಾಗೂ ಸಾರಿ ಇರುವ ಎಲ್ಲ ಪ್ರಕರಣಗಳಲ್ಲಿ ಕಡ್ಡಾಯ ಟೆಸ್ಟಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ.
- ಒಳಾಂಗಣ ಪ್ರದೇಶದ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ.
- ಏರ್ಪೋರ್ಟ್ನಲ್ಲಿ ವಿದೇಶಿ ಪ್ರಯಾಣಿಕರ ರ‍್ಯಾಂಡಮ್ ಟೆಸ್ಟಿಂಗ್ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕ್ರಮ.
- ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಕಾರ್ಯನಿರ್ವಹಣೆ ಬಗ್ಗೆ ತಾಂತ್ರಿಕ ಪರಿಶೀಲನೆ. ಸುಗಮ ಕೆಲಸ ಮಾಡುವ ನಿಟ್ಟಿನಲ್ಲಿ ಸಿದ್ದತೆ.
- ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ಗೆ ಹಾಸಿಗೆ ಮೀಸಲು ಇಡಲು ಸೂಚನೆ.
- ಖಾಸಗಿ ಆಸ್ಪತ್ರೆಗಳಿಗೂ ಕೋವಿಡ್ ಪ್ರತ್ಯೇಕ ಬೆಡ್ ಮೀಸಲಿಡಲು ಸೂಚನೆ.
- ಬೂಸ್ಟರ್ ಡೋಸ್ ಲಸಿಕೆಗೆ ವಿಶೇಷ ಪ್ರಾಶಸ್ತ್ಯ. ಎಲ್ಲಾ ಜಿಲ್ಲಾ ಹಾಗೂ ತಾಲೂಕಿನಲ್ಲಿ ವಿಶೇಷ ಲಸಿಕೆ ಕ್ಯಾಂಪ್ ನಡೆಸಲು ನಿರ್ಧಾರ.
- ಮೂರನೇ ಡೊಸ್ 100% ಟಾರ್ಗೆಟ್ ಪೂರ್ಣಗೊಳಿಸಲು ಕ್ರಮ ಹಾಗೂ ರಾಜ್ಯದಲ್ಲಿ ಅಗತ್ಯ ಲಸಿಕೆ ಸಂಗ್ರಹ ಮಾಡಲು ಕ್ರಮ ಕೈಗೊಳ್ಳಲಾಗುವುದು.
- ರಾಜ್ಯ ಸರ್ಕಾರ ಸರ್ವ ರೀತಿಯಲ್ಲಿ ಸಿದ್ಧತೆ ಕೈಗೊಳ್ಳುತ್ತಿದೆ. ಮೂರನೇ ಡೋಸ್ ಆದಷ್ಟು ಶೀಘ್ರವಾಗಿ ಕೈಗೊಳ್ಳಬೇಕು. ಈ ಬಗ್ಗೆ ಉದಾಸೀನತೆ ಬೇಡ.
ಇದನ್ನೂ ಓದಿ: ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ.. ವಿಮಾನ ನಿಲ್ದಾಣಗಳಲ್ಲಿ ರ‍್ಯಾಂಡಮ್ ಟೆಸ್ಟ್: ಕೇಂದ್ರ ಸಚಿವ ಮಾಂಡವಿಯಾ