ಬೆಳಗಾವಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಎಂಟು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸೋಮಪ್ರಕಾಶ್ ಕೇಂದ್ರದ ಯೋಜನೆಗಳ ಪರಿಶೀಲನೆಗೆ ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದರು.
ಕಾರ್ಯಕ್ರಮ: ಜೂನ್ 23ಕ್ಕೆ ಬೆಳಗ್ಗೆ ಬೆಳಗಾವಿಗೆ ಆಗಮಿಸಲಿರುವ ಸೋಮಪ್ರಕಾಶ್ ಅಂದು ಬೆಳಗ್ಗೆ ಬೆಳಗಾವಿಯಲ್ಲಿ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ. ಅಂದೇ ಮಧ್ಯಾಹ್ನ ದಲಿತರ ಮನೆಯಲ್ಲಿ ನಾವೆಲ್ಲರೂ ಭೋಜನ ಕೂಡ ಸೇವಿಸಲಿದ್ದೇವೆ. ಬಳಿಕ ಯೋಜನೆಗಳು ಫಲಾನುಭವಿಗಳಿಗೆ ದೊರೆತಿವೆಯೋ? ಇಲ್ಲವೋ? ನಾಗರಿಕರ ಜೀವನದಲ್ಲಿ ಕೇಂದ್ರದ ಯೋಜನೆ ಬದಲಾವಣೆ ತಂದಿದೆಯೇ? ಹೀಗೆ ಎಲ್ಲಾ ಆಯಾಮಗಳಲ್ಲಿ ಕೇಂದ್ರ ಸಚಿವರು ಮಾಹಿತಿ ಪಡೆಯಲಿದ್ದಾರೆ.
ಜೂನ್ 24ರಂದು 13 ಯೋಜನೆಗಳ ಬಗ್ಗೆ ಸುವರ್ಣಸೌಧದಲ್ಲಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಈ ಹಿಂದೆ ಬಿಎಸ್‌ವೈ ಮತ್ತು ನಾನು ರಾಜ್ಯ ಸುತ್ತಿ ದಲಿತರ ಮನೆಯಲ್ಲಿ ಊಟ ಮಾಡಿದ್ದೇವೆ. ಕೇಂದ್ರ ಸರ್ಕಾರ ಬಹಳಷ್ಟು ಯೋಜನೆಗಳನ್ನು ದಲಿತರಿಗೆ ನೀಡಿದೆ. ದಲಿತರ ಮನೆಯಲ್ಲಿ ಭೋಜನ ಮಾಡುತ್ತಿರುವುದು ರಾಜಕೀಯ ಲಾಭಕ್ಕಲ್ಲ ಎಂದರು.
ಇದನ್ನೂ ಓದಿ: ಕರ್ನಾಟಕದ ವಿಧಾನಸಭೆ ಆರಂಭವಾಗಿ ಇಂದಿಗೆ 70 ವರ್ಷ: ಪ್ರಜಾಪ್ರಭುತ್ವದ ಐತಿಹಾಸಿಕ ಹಿನ್ನೋಟ
ಲೆಕ್ಕಾಚಾರ ತಪ್ಪಾಯ್ತು!: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಕೆಲವೊಮ್ಮೆ ಲೆಕ್ಕಾಚಾರ ಏರುಪೇರಾಗುತ್ತವೆ. ರಾಜ್ಯದ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೇನೂ ಹಿನ್ನೆಡೆ ಆಗಿಲ್ಲ.
ಈ ಮೊದಲು ಬಿಜೆಪಿಗೆ ಎರಡು ಸ್ಥಾನಗಳಿದ್ದವು, ಈಗಲೂ ಎರಡು ಗೆದ್ದಿದ್ದೇವೆ. ಸೋಲಿಗೆ ಕಾರಣಗಳೇನು ಎಂದು ವರದಿ ಕೇಳಿದ್ದೇವೆ. ಕಾಂಗ್ರೆಸ್ಸಿಗರು ಹಣದ ಹೊಳೆ ಹರಿಸಿ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಆಯಾ ಸಂದರ್ಭಕ್ಕೆ ಇರುತ್ತವೆ ಎಂದರು.