ಬೆಳಗಾವಿ : ಕಾವೇರಿ, ಮಹದಾಯಿ, ಕೃಷ್ಣ ಮೂರು ಪ್ರಮುಖ ಜಲ ವಿವಾದಗಳ ಪರ ವಕಾಲತ್ತು ವಹಿಸಿದ್ದ 41 ಜನ ಹಿರಿಯ ನ್ಯಾಯವಾದಿಗಳಿಗೆ ಈವರೆಗೆ ರಾಜ್ಯ ಸರ್ಕಾರದಿಂದ ಬರೋಬ್ಬರಿ 122 ಕೋಟಿ 75 ಲಕ್ಷ ರೂ. ಶುಲ್ಕ ಸಂದಾಯವಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ. ಮಾಹಿತಿ ಹಕ್ಕಿನಡಿ ವಕೀಲರ ಶುಲ್ಕದ ಬಗ್ಗೆ ಅವರು ಮಾಹಿತಿ ಕೇಳಿದ್ದರು. ಜಲ ಸಂಪನ್ಮೂಲ ಇಲಾಖೆಯು ಈ ಮಾಹಿತಿಯನ್ನು ನೀಡಿದೆ.
ನಗರದಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಗಡಾದ್, ಕರ್ನಾಟಕ - ತಮಿಳುನಾಡು - ಕೇರಳ - ಪಾಂಡಿಚೇರಿ ಸೇರಿ ನಾಲ್ಕು ರಾಜ್ಯಗಳ ಮಧ್ಯೆ ಇರುವ ಕಾವೇರಿ ಜಲವಿವಾದ ಸಂಬಂಧ 1990ರಲ್ಲಿ ಕಾವೇರಿ ವಿವಾದ ಇತ್ಯರ್ಥಕ್ಕೆ ಕಾವೇರಿ ನ್ಯಾಯಾಧೀಕರಣ ರಚನೆ ಮಾಡಲಾಗಿದೆ. 2017ರ ವರೆಗೆ ಕಾವೇರಿ ನ್ಯಾಯಾಧೀಕರಣ ಎದುರು 580 ಸಭೆಗಳಾಗಿದ್ದು, ರಾಜ್ಯದ ಪರ ವಕಾಲತ್ತು ವಹಿಸಿದ್ದ ವಕೀಲರಿಗೆ ರಾಜ್ಯ ಸರ್ಕಾರ 54 ಕೋಟಿ 13 ಲಕ್ಷ ಶುಲ್ಕ ಪಾವತಿಸಿದೆ. ಇನ್ನು ಕರ್ನಾಟಕ - ಮಹಾರಾಷ್ಟ್ರ - ಆಂಧ್ರಪ್ರದೇಶ ಮೂರು ರಾಜ್ಯಗಳ ಮಧ್ಯೆ ಇರುವ ಕೃಷ್ಣಾ ನದಿ ವಿವಾದಕ್ಕೆ ಸಂಬಂಧಿಸಿದಂತೆ 2004ರಲ್ಲಿ ಕೃಷ್ಣಾ ನ್ಯಾಯಾಧೀಕರಣ ರಚನೆ ಮಾಡಲಾಗಿದೆ. 2013ರವರೆಗೆ ಕೃಷ್ಣಾ ನ್ಯಾಯಾಧೀಕರಣ ಎದುರು 295 ಸಭೆಗಳು ನಡೆದಿವೆ. ಈವರೆಗೆ ರಾಜ್ಯದ ಪರ ವಾದ ಮಂಡಿಸಿದ ವಕೀಲರಿಗೆ ಸರ್ಕಾರ 43 ಕೋಟಿ 24 ಲಕ್ಷ ಶುಲ್ಕ ಸಂದಾಯ ಮಾಡಲಾಗಿದೆ.
ಇನ್ನು ಕರ್ನಾಟಕ - ಗೋವಾ - ಮಹಾರಾಷ್ಟ್ರ ಮೂರು ರಾಜ್ಯಗಳ ಮಧ್ಯೆ ಇರುವ ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಬಗ್ಗೆ 2010ರಲ್ಲಿ ಮಹದಾಯಿ ನ್ಯಾಯಾಧೀಕರಣ ರಚನೆ ಆಗಿದ್ದು, 2017ರವರೆಗೆ ಮಹದಾಯಿ ನ್ಯಾಯಾಧೀಕರಣ ಎದುರು 97 ಸಭೆಗಳು ಆಗಿವೆ. ಈ ವೇಳೆ ರಾಜ್ಯದ ಪರ ವಾದ ಮಂಡಿಸಿದ ವಕೀಲರಿಗೆ 25 ಕೋಟಿ 38 ಲಕ್ಷ ರೂ. ಶುಲ್ಕ ಸರ್ಕಾರ ಪಾವತಿಸಿದೆ.
1991-92ರಲ್ಲಿ ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಧೀಕರಣಗಳು ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿದ್ದವು. ಆದರೆ, ಅಂದಿನ ಮುಖ್ಯಮಂತ್ರಿ ಬಂಗಾರಪ್ಪನವರು ಆ ಎರಡೂ ತೀರ್ಪುಗಳಿಗೆ ಸುಗ್ರೀವಾಜ್ಞೆ ತರುವ ಮೂಲಕ ದಿಟ್ಟತನ ತೋರಿದ್ದರು. ಅಂತಹ ದಿಟ್ಟತನ ಪ್ರದರ್ಶಿಸಲು ನಿಮಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಗಡಾದ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಇದನ್ನೂ ಓದಿ : ಕಾವೇರಿ ನೀರು ಹಂಚಿಕೆ ವಿವಾದವನ್ನು ರೈತರ ಹಿತರಕ್ಷಣೆಗೆ ಅಡ್ಡಿಯಾಗದಂತೆ ಬಗೆಹರಿಸಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ