ಬೆಳಗಾವಿ: ಕಳೆದ ಹಲವು ದಿನಗಳಿಂದ ಜಿಲ್ಲೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಮಾರುತಿ ಗಲ್ಲಿಯ ನಿವಾಸಿ ಅಕ್ಷಯ ಚೌಗಲೆ (22), ಬಸವನ ಕುಡಚಿಯ ಮಹೇಶ ಅನಗೋಳಕರ (19), ಬಸವನ ಕುಡಚಿಯ ಆಕಾಶ ಅನಗೋಳಕರ (21) ಬಂಧಿತ ಆರೋಪಿಗಳು. ಬಂಧಿತ ಮೂವರು ಆರೋಪಿಗಳಿಂದ 6.50 ಲಕ್ಷ ಮೌಲ್ಯದ 18 ಬೈಕ್‍ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಘಟನೆ: ಜು.9ರಂದು ಬೆಳಗಾವಿ ರಾಜಹಂಸಗಡದ ಕಿಲ್ಲಾ ಬಳಿ ದ್ವಿಚಕ್ರ ವಾಹನ ಕಳ್ಳತನದ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೈಕ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮೀಣ ಠಾಣೆ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾದರು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಪಿಐ ಸುನಿಲ್‌ಕುಮಾರ ನಂದೇಶ್ವರ ನೇತೃತ್ವದಲ್ಲಿ ಪಿಎಸ್ಐ ಆನಂದ ಅದಗೊಂಡ ಹಾಗೂ ಸಿಬ್ಬಂದಿಗಳಾದ ವೈ.ವೈ. ತಳೇವಾಡ , ಎಂ.ಎಸ್. ಗಾಡವಿ, ಸಿ.ಎಂ. ಹುಣಶ್ಯಾಳ, ಎನ್.ಎಂ ಚಿಪ್ಪಲಕಟ್ಟಿ, ಜಿ.ವೈ. ಪೂಜಾರ, ಎಸ್.ಎಂ. ಸಿಂದಗಿ ಅವರನ್ನು ಒಳಗೊಂಡ ತಂಡ ಬೈಕ್ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಭೇದಿಸಿದ ಗ್ರಾಮೀಣ ಠಾಣೆಯ ಪೋಲಿಸರ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.