ಬೆಳಗಾವಿ: ಮದುವೆ ಮಾಡಿಕೊಳ್ಳಲು ಕನ್ಯೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಮನನೊಂದ ಯುವಕನೊಬ್ಬ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯುವ ರೈತ ರಮೇಶ್ ಬಾಳಪ್ಪ ಪಾಟೀಲ್(25) ಆತ್ಮಹತ್ಯೆಗೆ ಶರಣಾಗಿರುವ ಯುವಕ.
ಮೃತ ರಮೇಶ ಮನೆಯಲ್ಲಿ ಹಿರಿಯ ಇಬ್ಬರು ಸಹೋದರರಿಗೆ ಬಹು ದಿನಗಳಿಂದ ಹೆಣ್ಣು ಹುಡುಕುತ್ತಿದ್ದರು. ಅವರಿಗೆ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ ಎಂದು ಯಾರೋ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ರಮೇಶ್ ತನಗೂ ಹೆಣ್ಣು ಸಿಗುವುದಿಲ್ಲ ಅಂತಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪಾಶ್ಚಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮುಂದುವರೆದ ಎಂಇಎಸ್ ಉದ್ಧಟತನ: ಮರಾಠಿಯಲ್ಲಿ ಸರ್ಕಾರಿ ದಾಖಲೆ ನೀಡುವಂತೆ ಒತ್ತಾಯ
ಹೆಣ್ಣು ಹೆತ್ತ ಕುಟುಂಬಸ್ಥರು ತಮ್ಮ ಮಗಳು ಸುಖವಾಗಿರಲಿ ಎಂದು ಸರ್ಕಾರಿ ನೌಕರಿ ಇರುವ ಗಂಡು ಹುಡುಕಿ ಮದುವೆ ಮಾಡುತ್ತಾರೆ. ಇದರಿಂದ ಹಗಲು-ರಾತ್ರಿ ಎನ್ನದೇ ಜಮೀನಿನಲ್ಲಿ ಕೆಲಸ ಮಾಡುವ ರೈತರಿಗೆ ಹೆಣ್ಣು ಸಿಗುತ್ತಿಲ್ಲವಲ್ಲ ಎಂಬ ಅಸಮಾಧಾನ ಗ್ರಾಮಸ್ಥರಲ್ಲಿದೆ. ಆದರೆ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕರು ಆತ್ಮಹತ್ಯೆ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ ನಿಖರ ಕಾರಣ ಪೊಲೀಸ್ ತನಿಖೆ ಬಳಿವೇ ಹೊರಬರಬೇಕಿದೆ.