ಬೆಳಗಾವಿ: ಮಹಾಮಾರಿ ಕೊರೊನಾದಿಂದ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಕೈಗೆಟುಕುವ ದರದಲ್ಲಿ ಸಿಗುತ್ತಿದ್ದ ಅಗತ್ಯ ವಸ್ತುಗಳ ಬೆಲೆಯೀಗ ಗಗನಕ್ಕೇರಿದ್ದು, ಬೆಳಗಾವಿಯ ಸಾಮಾನ್ಯ ಜನರು ನಲುಗಿ ಹೋಗಿದ್ದಾರೆ.
ದಿನೇ ದಿನೆ ಇಂಧನ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ಪರಿಣಾಮ ಎಲ್ಲಾ ಅಗತ್ಯ ವಸ್ತುಗಳ ಬೆಲೆಯೂ ಕೂಡ ಏರಿಕೆಯಾಗುತ್ತಿದೆ. ಹೀಗಾಗಿ ಸಾಮಾನ್ಯ ಜನರು ಜೀವನ ನಡೆಸುವುದು ಕಷ್ಟಕರವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ತಕ್ಷಣವೇ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸದಿದ್ದರೆ ಬೀದಿಗೆ ಬರುವುದು ಅನಿವಾರ್ಯವಾಗಲಿದೆ ಎಂದು ಸಾಮಾನ್ಯ ಜನರು ಅಳಲು ತೋಡಿಕೊಂಡಿದ್ದಾರೆ.
ಇಂಧನ ದರ ಏರಿಕೆ:
ಕಳೆದ ನಾಲ್ಕೈದು ತಿಂಗಳಿನಿಂದ ಇಂಧನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನೆರೆಯ ಮಹಾರಾಷ್ಟ್ರ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳಗಾವಿಗೆ ಅಗತ್ಯ ವಸ್ತುಗಳು ಪೂರೈಕೆಯಾಗುತ್ತವೆ. ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಾನ್ಸ್ಪೋರ್ಟ್ ಏಜೆನ್ಸಿಗಳು ಇಂಧನದ ಬೆಲೆ ಏರಿಕೆಯಿಂದ ತಮ್ಮ ಬಾಡಿಗೆ ದರವನ್ನು ಹೆಚ್ಚಿಸಿವೆ. ಇದರಿಂದ ಸಹಜವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೂ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತರಕಾರಿ ದರದಲ್ಲೂ ಹೆಚ್ಚಳ:
ಅತಿವೃಷ್ಟಿಯ ಕಾರಣ ದೇಶದಲ್ಲಿ ಈರುಳ್ಳಿಯ ಅಭಾವ ಉಂಟಾಗಿದೆ. ವಿದೇಶಕ್ಕೆ ಈರುಳ್ಳಿ ರಫ್ತನ್ನು ಕೇಂದ್ರ ಸರ್ಕಾರ ತಡೆದರೂ ಕೂಡ ದೇಶದಲ್ಲಿ ಈರಳ್ಳಿ ಅಭಾವ ಇದೆ. ಈ ಕಾರಣಕ್ಕೆ ಇದೀಗ ಈರಳ್ಳಿ ಬೆಲೆಯಲ್ಲೂ ಏರಿಕೆಯಾಗಿದೆ. ಅಲ್ಲದೇ ಇನ್ನಿತರೆ ತರಕಾರಿ, ಕಾಯಿಪಲ್ಯದ ದರದಲ್ಲೂ ಏರಿಕೆಯಾಗಿರುವುದನ್ನು ಕಾಣಬಹುದು.
ಈ ಸುದ್ದಿಯನ್ನೂ ಓದಿ: ಶತಕದತ್ತ ತೈಲ ಬೆಲೆ; ಇದಕ್ಕೆ ಕಾರಣವೇನು ಗೊತ್ತೆ.!?
ಇನ್ನು ಅಡುಗೆಗೆ ಬಳಸುವ ಎಣ್ಣೆಯ ದರವೂ ಊಹಿಸದಷ್ಟು ಏರಿಕೆಯಾಗಿದೆ. 90 ರೂ. ಇದ್ದ ತೊಗರಿ ಬೇಳೆ ಇದೀಗ ಕೆಜಿಗೆ 120 ರೂ. ಆಗಿದೆ. 85 ರೂ. ಇದ್ದ ಅಡುಗೆ ಎಣ್ಣೆ ಇದೀಗ ಲೀಟರ್ಗೆ 142 ರೂ. ಆಗಿದೆ. 350 ರೂ. ಇದ್ದ ಸಿಮೆಂಟ್ ದರ ಇದೀಗ 400ರ ಗಡಿ ದಾಟಿದೆ. 40 ಸಾವಿರ ಇದ್ದ ಸ್ಟೀಲ್ ದರ ಕ್ವಿಂಟಾಲ್‍ಗೆ 53 ಸಾವಿರ ರೂ. ಆಗಿದೆ. 597 ರೂ. ಇದ್ದ ಅಡುಗೆ ಅನಿಲದ ದರ ಇದೀಗ 722 ರೂ. ಆಗಿದೆ. 83.69 ರೂ. ಇದ್ದ ಪೆಟ್ರೋಲ್ ದರ ಇದೀಗ 92.65 ರೂ. ಆಗಿದೆ. 74.76 ರೂ. ಇದ್ದ ಡೀಸೆಲ್ ದರ 84 ರೂಪಾಯಿ ಆಗಿದೆ. ಒಟ್ಟಾರೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಜನಸಾಮಾನ್ಯರ ನಿದ್ದೆಗೆಡಿಸಿದೆ.
ಅನ್ನ ಬಿಟ್ಟು ಮಣ್ಣು ತಿನ್ನುವಂತಾಗಿದೆ:
ಬೆಲೆ ಏರಿಕೆಯ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಜನಸಾಮಾನ್ಯರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದ ನಾವು ಅನ್ನ ಬಿಟ್ಟು ಮಣ್ಣು ತಿನ್ನುವ ಪರಿಸ್ಥಿತಿ ಬಂದಿದೆ. ಅಡುಗೆ ಅನಿಲ ದರದ ಏರಿಕೆಯಿಂದ ಸಿಲಿಂಡರ್ ಬಿಟ್ಟು ಒಲೆಯಲ್ಲಿ ಅಡುಗೆ ಮಾಡುವ ಪರಿಸ್ಥಿತಿ ಬಂದಿದೆ. ಕೇಂದ್ರ ಸರ್ಕಾರ ತಕ್ಷಣವೇ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು. ಇಲ್ಲವಾದರೆ ಜನಸಾಮಾನ್ಯರು ಬೀದಿಗೆ ಬಂದು ಪ್ರತಿಭಟನೆ ನಡೆಸಬೇಕಾಗುತ್ತದೆ.
ಕೊರೊನಾದಿಂದ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಉದ್ಯೋಗ ಇದ್ದವರ ಸಂಬಳ ಕೂಡ ಕಡಿತ ಮಾಡಲಾಗುತ್ತಿದೆ. ಇದರಿಂದ ದುಬಾರಿ ದುನಿಯಾದಲ್ಲಿ ಬದುಕುವುದು ಕಷ್ಟವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.