ಬೆಳಗಾವಿ : ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ, ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ನೂತನ ಡಿಸಿ ಡಾ.ಕೆ ಹರೀಶ್ ಕುಮಾರ್ ಸೂಚಿಸಿದ್ದಾರೆ.
ನಗರದ ಡಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ನಮ್ಮ ಜಿಲ್ಲೆಯಲ್ಲೂ ಕಳೆದ ಎರಡ್ಮೂರು ದಿನಗಳಿಂದ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ, ಜಿಲ್ಲಾಡಳಿತದಿಂದ ತಪಾಸಣೆ ಹೆಚ್ಚಿಸಲಾಗಿದೆ. ಮುಂಬರುವ ಮೂರು ತಿಂಗಳ ಕಾಲ ಹೆಚ್ಚಿನ ಜನ ಸೇರುವ ಉತ್ಸವ, ಜಾತ್ರೆ ಸೇರಿದಂತೆ ಇತರ ಸಭೆ, ಸಮಾರಂಭಗಳು ಮಾಡುವಾಗ ಜನರು ಎಚ್ಚರ ವಹಿಸಬೇಕು. ತಜ್ಞರು ಕೋವಿಡ್ ಎರಡನೇ ಅಲೆ ಪ್ರಾರಂಭವಾಗುವ ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ, ಕಟ್ಟು ನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿದೆ. ಹೀಗಾಗಿ, ಜನರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು, ಇದರಲ್ಲಿ ಯಾವುದೇ ರಾಜಿಯಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ದೃಢವಾಯ್ತು ಕೋವಿಡ್ 2ನೇ ಅಲೆ: ಕೋವಿಡ್ ಕೇರ್ ಸೆಂಟರ್ ಪುನಾರಂಭ
ಜಿಲ್ಲೆಯ ಎಲ್ಲಾ ಎಸಿ, ತಹಶೀಲ್ದಾರ್ಗಳು ಸಮನ್ವಯ ಕಾಯ್ದುಕೊಂಡು ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಪರಿಶೀಲನೆ ನಡೆಸಬೇಕು. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡುವವರು, ಅದಕ್ಕೆ ಸಹಕಾರ ನೀಡುವವರ ಮೇಲೆಯೂ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಆದೇಶ ಕೂಡ ಮಾಡಿದ್ದೇನೆ ಎಂದರು.
ಕೆಲವರು ಸಣ್ಣ ಕಾರ್ಯಕ್ರಮಗಳೆಂದು ಅನುಮತಿ ಪಡೆದು, ಸಾವಿರಾರು ಜನರನ್ನು ಸೇರಿಸುತ್ತಿದ್ದಾರೆ. ಹೀಗಾಗಿ, ಜಾತ್ರೆ, ಮದುವೆ ಹಾಗೂ ಸಮಾರಂಭಗಳಲ್ಲಿ ಯಾವುದೇ ಕಾರಣಕ್ಕೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಕಠಿಣ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.