ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡಿಗರ ಜೊತೆಗೆ ಮರಾಠಿ, ಉರ್ದು, ಕೋಂಕಣಿ ಭಾಷಿಕರು ಅನ್ನೋನ್ಯವಾಗಿ ನೆಲೆಸಿದ್ದಾರೆ. ಆದರೆ, ಮರಾಠಿ ಭಾಷಿಕರನ್ನು ಪ್ರಚೋದಿಸುವ ಕೆಲಸವನ್ನು ಶಿವಸೇನೆ ಹಾಗೂ ಎಂಇಎಸ್ ಮೊದಲಿನಿಂದಲೂ ಮಾಡುತ್ತಲೇ ಬಂದಿದೆ.
ಶಿವಸೇನೆ ಹಾಗೂ ಎಂಇಎಸ್‍ಗೆ ನಿಜವಾಗಿಯೂ ಮರಾಠಿ ಭಾಷಿಕರ ಮೇಲೆ ಕಾಳಜಿ ಇಲ್ಲ. ಕೇವಲ ತಮ್ಮ ರಾಜಕೀಯ ಲಾಭಕ್ಕೆ ನಮ್ಮ ಲಾಭ ಪಡೆಯುತ್ತಿದ್ದಾರೆ ಎಂಬುವುದನ್ನು ಇಲ್ಲಿನ ಮರಾಠಿ ಭಾಷಿಕರು ಮನಗಂಡಿದ್ದಾರೆ. ಈ ಕಾರಣಕ್ಕೆ ಮಹಾರಾಷ್ಟ್ರ ಸಿಎಂ ಠಾಕ್ರೆಗೆ ಸೊಪ್ಪು ಹಾಕದಿರಲು ಬೆಳಗಾವಿಯ ಮರಾಠಿ ಭಾಷಿಕರು ನಿರ್ಧರಿಸಿದ್ದಾರೆ.
ಏನದು ಮರಾಠಿ ಭಾಷಿಕರ ನಿರ್ಧಾರ? : ಗಡಿಭಾಗದಲ್ಲಿರುವ ಅಮಾಯಕ ಮರಾಠಿ ಭಾಷಿಕರನ್ನು ಶಿವಸೇನೆ, ಎನ್‍ಸಿಪಿ ಹಾಗೂ ಎಂಇಎಸ್ ಕಾರ್ಯಕರ್ತರು ಪ್ರಚೋದಿಸುತ್ತಲೇ ಬಂದಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಲಾಭ ಪಡೆಯುತ್ತಿದ್ದಾರೆ.
ಇಷ್ಟು ದಿನ ಸತ್ಯಾಸತ್ಯತೆ ಅರಿಯದೇ ಮರಾಠಿ ಭಾಷಿಕರು ಎಂಇಎಸ್ ಮುಖಂಡರ ಮಾತಿಗೆ ಮರಳಾಗಿದ್ದರು. ಮರಾಠಿ ಭಾಷಿಕರು ಹೆಚ್ಚಿರುವ ಗ್ರಾಮಗಳಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ನಡೆಸಿ ಅಲ್ಲಿ ವಿವಾದಾತ್ಮಕ ಠರಾವು ಪಾಸ್ ಮಾಡುತ್ತಿದ್ದರು.
ಬೆಳಗಾವಿ ಸೇರಿ ಗಡಿಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಠರಾವು ಪಾಸ್ ಮಾಡಿ, ಮಹಾರಾಷ್ಟ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತಿದ್ದರು. ಈ ಕಾರ್ಯಕ್ಕೆ ಶಿವಸೇನೆ ಹಾಗೂ ಎಂಇಎಸ್ ಕೈಜೋಡಿಸಿ ರಾಜಕೀಯ ಲಾಭ ಪಡೆಯುತ್ತಿದ್ದರು.
ಆದರೆ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ ಅಸ್ತಿತ್ವಕ್ಕಾಗಿ ಪದೇಪದೆ ಗಡಿವಿವಾದ ಕೆದಕುತ್ತಿದ್ದಾರೆ ಎಂಬ ಸತ್ಯವನ್ನು ಇಲ್ಲಿನ ಮರಾಠಿ ಭಾಷಿಕರು ಅರಿತಿದ್ದಾರೆ. ಈ ಕಾರಣಕ್ಕೆ ಇನ್ನು ಮುಂದೆ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಠರಾವು ಪಾಸ್ ಮಾಡುವ ನಿರ್ಧಾರವನ್ನೇ ಕೈಬಿಡಲು ನಿರ್ಧರಿಸಿದ್ದಾರೆ.
ಅಲ್ಲದೇ ಎರಡು ದಿನಗಳ ಹಿಂದೆ ಬೆಳಗಾವಿ ತಾಲೂಕಿನ ಕುದುರೆಮನೆ ಗ್ರಾಮದಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ಠರಾವ್ ಪಾಸ್ ಮಾಡಲಾಗಿಲ್ಲ. ಮುಂದೆಯೂ ಠರಾವು ಪಾಸ್ ಮಾಡದಿರಲು ನಿರ್ಧರಿಸಿದ್ದಾರೆ.
ಕರ್ನಾಟಕದ ಮರಾಠಿ ಭಾಷಿಕರ ಈ ದಿಟ್ಟ ನಡೆ ಠಾಕ್ರೆ ಸೇರಿ ಗಡಿವಿವಾದ ಕೆದಕುವ ಎಲ್ಲರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ. ಆದರೆ, ಈ ನಡೆಯನ್ನು ಬೆಳಗಾವಿಯ ಕನ್ನಡ ಪರ ಸಂಘಟನೆಗಳು ಸ್ವಾಗತಿಸಿವೆ. ಅಲ್ಲದೇ ಮುಂಬರುವ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಕೈಜೋಡಿಸುವುದಾಗಿಯೂ ಹೇಳಿದ್ದಾರೆ.
ಕಂಗಾಲಾದ ಉದ್ಧವ್ ಠಾಕ್ರೆ : ಮಹಾರಾಷ್ಟ್ರದ ಮುಖ್ಯಮಂತ್ರಿ ಆದಾಗಿನಿಂದ ಉದ್ಧವ್ ಠಾಕ್ರೆ ಗಡಿವಿವಾದ ಕೆದಕುತ್ತಿದ್ದಾರೆ. ಬೆಳಗಾವಿ ಪಡೆದೇ ತಿರುತ್ತೇವೆ ಎಂದಿದ್ದ ಠಾಕ್ರೆಗೆ ಇಲ್ಲಿನ ಪ್ರಜ್ಞಾವಂತ ಮರಾಠಿ ಭಾಷಿಕರು ಟ್ವೀಟ್ ಮೂಲಕವೇ ತಿರುಗೇಟು ಕೊಟ್ಟಿದ್ದರು.
ಕರ್ನಾಟಕದಲ್ಲಿ ನೆಲೆಸಿರುವುದು ದೇವರ ದಯೆ ಎಂದಿದ್ದರು. ಇದೀಗ ಇಲ್ಲಿನ ಮರಾಠಿ ಭಾಷಿಕರು ತೆಗೆದುಕೊಂಡಿರುವ ನಿರ್ಧಾರಕ್ಕೆ ಮಹಾ ಸಿಎಂ ಉದ್ಧವ್ ಠಾಕ್ರೆ ಕಂಗಾಲಾಗಿದ್ದಾರೆ.