ಬೆಳಗಾವಿ: ಬೆಳಗಾವಿ ನಗರ ಪೊಲೀಸರು ಹಾಗೂ ಜಿಲ್ಲಾ ಪೊಲೀಸರ ನಡುವಿನ ಮುಸುಕಿನ ಗುದ್ದಾಟಕ್ಕೆ ನಗರದ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೇ ಇಲಾಖೆಯಾದರೂ ಈ ಇಬ್ಬರ ನಡುವೆ ಇರುವ ಗುದ್ದಾಟ ಎಂತಹದ್ದು, ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಏನು ಅಂತೀರಾ ಈ ಸ್ಟೋರಿ ನೋಡಿ.
ನಗರದ ಮಧ್ಯ ಭಾಗದಲ್ಲಿರುವ ನಗರ ಪೊಲೀಸ್ ಆಯುಕ್ತಾಲಯ, ಹೊರ ವಲಯಕ್ಕೆ ಶಿಫ್ಟ್ ಆಗುತ್ತಿರುವುದು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಪೊಲೀಸರು ಹಾಗೂ ಜಿಲ್ಲಾ ಪೊಲೀಸರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಇಂದು ನಗರ ಪೊಲೀಸ್ ಆಯುಕ್ತಾಲಯ ನಗರದ ಮಧ್ಯ ಭಾಗದಿಂದ ಬೇರೆ ಕಡೆಗೆ ಶಿಪ್ಟ್ ಆಗುತ್ತಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿಯ ಕಟ್ಟಡ ತುಂಬ ಹಳೆಯದಾಗಿದ್ದು, ಮಳೆಗಾಲದ ಸಂದರ್ಭದಲ್ಲಿ ಸೊರುತ್ತಿದ್ದ ಕಾರಣ ಇದೀಗ ಹೊಸ ಕಟ್ಟಡ ಕಟ್ಟಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ ಈಗ ಇರುವ ಜಾಗದಲ್ಲೇ ಕಟ್ಟಡ ಕಟ್ಟಬೇಕು ಎನ್ನುವುದು ಒಂದು ಕಡೆಯಾಗಿದೆ. ಇತ್ತ ಜಿಲ್ಲಾ ಪೊಲೀಸ್ ಇಲಾಖೆ ಕಚೇರಿ ಪಕ್ಕದಲ್ಲೇ ಸಾಕಷ್ಟು ಜಾಗವಿದ್ದು, ಅಲ್ಲೇ ಕಟ್ಟಡ ನಿರ್ಮಿಸಿ ಎಂದು ಸಾರ್ವಜನಿಕರು ಇಲಾಖೆಗೆ ಮನವಿ ಮಾಡಿಕೊಟ್ಟಿದ್ದರು.
ಆದರೆ ಜಿಲ್ಲಾ ಪೊಲೀಸ್ ಇಲಾಖೆ ಖಾಲಿ ಇದ್ದ ಜಾಗ ನಮ್ಮದು ಅದನ್ನ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದೆ. ಈ ವೇಳೆ ಐಜಿಪಿ ರಾಘವೇಂದ್ರ ಸುಹಾಸ್ ಜತೆಗೆ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಕುಳಿತು ಮಾತನಾಡಬಹುದಿತ್ತು. ಆದರೆ ಆ ಕೆಲಸವನ್ನ ತ್ಯಾಗರಾಜನ್ ಮಾಡಲಿಲ್ಲ. ಈ ಕಾರಣಕ್ಕೆ ಜಾಗದ ವಿಚಾರ ಇಬ್ಬರು ಅಧಿಕಾರಿಗಳ ನಡುವೆ ಪ್ರತಿಷ್ಠೆ ವಿಚಾರವಾಗಿ ಮಾರ್ಪಟ್ಟು ನಗರದ ಮಧ್ಯದಲ್ಲಿದ್ದ ಜಾಗ ಹೊಸ ಕಟ್ಟಡಕ್ಕೆ ಸಿಗದಂತಾಯಿತು. ಇದು ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಮಧ್ಯ ಭಾಗಬಿಟ್ಟು ಕ್ಯಾಂಪ್ ಪ್ರದೇಶಕ್ಕೆ ಹೊಂದಿಕೊಂಡಿದ್ದ ಪೊಲೀಸ್ ಕ್ವಾಟರ್ಸ್ ಜಾಗದಲ್ಲಿ ಕಟ್ಟಡದ ಜಾಗ ಗುರುತಿಸಿದ್ದಾರೆ. ಸಚಿವ ಬಸವರಾಜ್ ಬೊಮ್ಮಾಯಿ ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್ ಮತ್ತು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ರನ್ನ ಕರೆದು ದಾಖಲೆ ಸಮೇತ ವಿವರವನ್ನ ಕೇಳಿದ್ದರು. ಜತೆಗೆ ಈ ಜಾಗದಲ್ಲಿ ಯಾಕೆ ಮಾಡುತ್ತಿದ್ದೀರಿ ಎಂಬುದಕ್ಕೆ ಕ್ಲಾರಿಫೀಕೇಶನ್ ಕೂಡ ಕೇಳಿ ಪಡೆದುಕೊಂಡರು. ಇನ್ನೂ 17 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ಆಗುತ್ತಿದೆ.
ಇದೀಗ ನಗರ ಪೊಲೀಸ್ ಆಯುಕ್ತರ ಕಚೇರಿ ಈಗ ಇದ್ದ ಸ್ಥಳದಿಂದ ಐದು ಕಿ.ಮೀ ದೂರದಲ್ಲಿ ನಿರ್ಮಿಸಲು ಆರಂಭಿಸಿದ್ದು, ಮುಂದೆ ಕಮೀಷನರ್ ಕಚೇರಿಗೆ ಹೋಗುವ ಸಾರ್ವಜನಿಕರು ಅರ್ಧ ದಿನ ಕಚೇರಿ ಹುಡುಕಲೇ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಲಾಖೆಯಲ್ಲಿನ ಅಧಿಕಾರಿಗಳ ಮುಸುಕಿನ ಗುದ್ದಾಟದಿಂದ ಸದ್ಯ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸುಳ್ಳಲ್ಲ.