ಬೆಳಗಾವಿ : ಮುಂಬೈನಿಂದ ಬಂದ ವ್ಯಕ್ತಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಆಗದೇ ಇರುವುದರಿಂದ, ಅವರನ್ನು ಕರೆಯಲು ಹೋದ ಪೊಲೀಸ್ ಪೇದೆಗೆ ಅವಾಚ್ಯ ಶಬ್ಧದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಳಿಹೊಸೂರಿನಲ್ಲಿ ಈ ಘಟನೆ ನಡೆದಿದೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪೇದೆಯ ಕಾಲರ್ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಗ್ರಾಮದ ಶಶಿಧರ್ ಗಾಣಗಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯ ತಂಗಿಯ ಗಂಡ ಹರ್ಷಾ ತೇಲಿ, ಆತನ ತಂದೆ ಅಣ್ಣಪ್ಪ ತೇಲಿ ಹಾಗೂ ತಾಯಿ ಭಾರತಿ ತೇಲಿ ಮುಂಬೈನಿಂದ ಆಗಮಿಸಿದ್ದರು.
ಈ ವೇಳೆ ಅವರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ಆದಾಗ್ಯೂ ಅವರು ಗ್ರಾಮದ ಶಶಿಧರ್ ಮನೆಗೆ ತೆರಳಿ ನಿನ್ನೆ ರಾತ್ರಿ ವಾಸವಿದ್ದರು. ಇದರಿಂದ ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಸಂಜೆ ಪೊಲೀಸ್ ಪೇದೆ ಆರೋಪಿ ಶಶಿಧರ್ ಮನೆಗೆ ತೆರಳಿದಾಗ ಹಲ್ಲೆಗೆ ಮುಂದಾಗಿದ್ದಾನೆ. ಇನ್ನು, ಮುಂಬೈನಿಂದ ಬಂದ ಮೂವರಿಗೆ ಬೈಲಹೊಂಗಲದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗಿದೆ.