ಚಿಕ್ಕೋಡಿ(ಬೆಳಗಾವಿ) : ಕರ್ನಾಟಕ ಗಡಿ ಹೊಂದಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ್ ತಾಲೂಕಿನ ವಿವಿಧ ಗ್ರಾಮಗಳಿಗೆ ಕರ್ನಾಟಕದಿಂದ ನೀರು ಪೂರೈಕೆ ಮಾಡಲಾಗುವುದೆಂದು ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹೇಳಿದ್ದಾರೆ.
ಶಿರಹಟ್ಟಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಯು ಅಥಣಿ ತಾಲ್ಲೂಕಿನ ವಿವಿಧ ಹಳ್ಳಿಗಳ ಹಾಗೂ ಮಹಾರಾಷ್ಟ್ರದ ಜತ್ತ್ ತಾಲೂಕಿನ ವಿವಿಧ ಗ್ರಾಮಗಳಿಗೆ ನೀರು ಹರಿಸುವ ಬೃಹತ್ ಯೋಜನೆಯಾಗಿದೆ. ಈ ನೀರಾವರಿ ಯೋಜನೆ ಮುಖಾಂತರ ಮಹಾರಾಷ್ಟ್ರದ ಕನ್ನಡಿಗರಿಗೆ ನೀರು ಒದಗಿಸಲಾಗುವುದು ಎಂದು ಹೇಳಿದರು.
ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ : ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಗೆ ಕೆಎನ್ಎನ್ ನಿಂದ ಅನುಮೋದನೆ ನೀಡಲಾಗಿದೆ. ಹಣಕಾಸು ಇಲಾಖೆಯ ಅನುಮೋದನೆ ಬಾಕಿಯಿದೆ. ಆದಷ್ಟು ಬೇಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಥಣಿಯಲ್ಲಿ ಭೂಮಿ ಪೂಜೆ ನೆರವೇರಿಸುತ್ತಾರೆ ಎಂದು ಹೇಳಿದರು.
ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಯು ಒಟ್ಟು 1450 ಕೋಟಿ ರೂ ಯೋಜನೆಯಾಗಿದೆ. ಇದರಲ್ಲಿ 1600 ಕೃಷಿ ಹೊಂಡ ನಿರ್ಮಾಣ,105 ಚೆಕ್ ಡ್ಯಾಮ್ ನಿರ್ಮಾಣ, 21 ಕೆರೆ ತುಂಬಿಸಲು ಈ ಬೃಹತ್ ಕಾಮಗಾರಿಯನ್ನು ಹೊಂದಿರುವ ಯೋಜನೆಯಾಗಿದೆ.
ಜತ್ತ ಭಾಗಕ್ಕೆ ನೀರು ಸರಬರಾಜು : ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಯಿಂದ ಕೊಟ್ಟಲಗಿ ಗ್ರಾಮದಲ್ಲಿ 80 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡಿ ಅಲ್ಲಿಂದ ಗಡಿ ಹೊಂದಿರುವ ಮಹಾರಾಷ್ಟ್ರದ ಜತ್ತ ಭಾಗಕ್ಕೆ ಬೃಹತ್ ವಿದ್ಯುತ್ ಮೋಟರ್ನಿಂದ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರ ಜೊತೆ ಒಪ್ಪಂದ : ಬೇಸಿಗೆ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ನೀರು ಬತ್ತಿ ನಮ್ಮ ಭಾಗದ ರೈತರಿಗೆ ಕೋಟ್ಯಂತರ ರೂಪಾಯಿ ಬೆಳೆ ನಷ್ಟ ಸಂಭವಿಸುತ್ತದೆ. ಇದನ್ನು ತಡೆಗಟ್ಟಲು ಬೇಸಿಗೆ ಸಂದರ್ಭದಲ್ಲಿ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ಬಿಡಬೇಕೆಂದು ಒಂದು ಸುತ್ತಿನ ಮಾತುಕತೆ ಮಾಡಲಾಗಿದೆ.
ಇದರೊಂದಿಗೆ ಮಹಾರಾಷ್ಟ್ರಕ್ಕೆ ಮರಳಿ ನಾವು ಎರಡು ಟಿಎಂಸಿ ನೀರು ಸರಬರಾಜು ಮಾಡಬೇಕೆಂದು ಷರತ್ತಿನ ಮೇಲೆ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಬರುವ ಜನವರಿಯಲ್ಲಿ ಸಿಎಂ ಬೊಮ್ಮಾಯಿ ಈ ಕಾಮಗಾರಿಗೆ ಚಾಲನೆ ನೀಡಬಹುದು ಎಂದು ಹೇಳಿದರು.
ಇದನ್ನೂ ಓದಿ : ಜತ್ತ ತಾಲೂಕಿಗೆ ಕರ್ನಾಟಕ ಸಿಎಂ ಆದಷ್ಟು ಬೇಗನೆ ಭೇಟಿ ನೀಡಲಿ : ಮಹಾ ಕನ್ನಡಿಗರ ಆಹ್ವಾನ