ಬೆಳಗಾವಿ: ಭೀಕರ ಮಳೆ ಹಿನ್ನೆಲೆ ಜಲಾವೃತವಾದ ಹಳ್ಳದ ಸೇತುವೆ ದಾಟುತ್ತಿದ್ದ ವ್ಯಕ್ತಿಯೊಬ್ಬ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಸಾಣಿಕೊಪ್ಪ ಗ್ರಾಮದಲ್ಲಿ ನಡೆದಿದ್ದು, ಘಟನಾ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೈಲಹೊಂಗಲ ತಾಲೂಕಿನ ಸಿದ್ದಸಮುದ್ರ ಗ್ರಾಮದ ಬಸಪ್ಪ ಜಡೆಯಣ್ಣನವರ್(24) ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ. ನಿನ್ನೆ ಬೈಲಹೊಂಗಲ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಸಾಣಿಕೊಪ್ಪ ಹಳ್ಳ ಸಂಪೂರ್ಣವಾಗಿ ಜಲಾವೃತವಾಗಿತ್ತು. ಈ ವೇಳೆ ವೃದ್ಧರೊಬ್ಬರನ್ನು ಹಿಂಬದಿ ಕುರಿಸಿಕೊಂಡು ಜಲಾವೃತವಾದ ಹಳ್ಳದ ಸೇತುವೆ ದಾಟುತ್ತಿದ್ದಾಗ ನೀರಿನ ರಭಸಕ್ಕೆ ಬೈಕ್ ಸಮೇತವಾಗಿ ಕೊಚ್ಚಿಕೊಂಡು ಹೋಗಿದ್ದರು.
ಈ ವೇಳೆ ಹಿಂಬದಿ ಕುಳಿತಿದ್ದ ವೃದ್ಧ ಬೈಕ್ನಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯನ್ನು ಸಹ ಸ್ಥಳೀಯರು ರಕ್ಷಿಸಿದ್ದಾರೆ. ಸದ್ಯಕ್ಕೆ ನೀರಿನ ಪ್ರಮಾಣ ಇಳಿಕೆಯಾಗಿದ್ದು, ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಮುಂಜಾಗ್ರತ ಕ್ರಮವಾಗಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂದು ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಧಾರಾಕಾರ ಮಳೆ: ನೆಲಕ್ಕುರುಳಿದ 27 ಮನೆ.. ಜನರ ಜೀವನ ಅಯೋಮಯ
ಒಂದು ಗಂಟೆ ಬಂದ್ ಆಗಿದ್ದ ಬೆಳಗಾವಿ-ಬೈಲಹೊಂಗಲ ರಸ್ತೆ: ಬೈಲಹೊಂಗಲ ತಾಲೂಕಿನಾದ್ಯಂತ ಭಾರಿ ಮಳೆಯಾದ ಪರಿಣಾಮ ಸಾಣಿಕೊಪ್ಪ ಹಳ್ಳದ ಸೇತುವೆ ಜಲಾವೃತವಾಗಿತ್ತು. ಪರಿಣಾಮ ಬೆಳಗಾವಿ - ಬೈಲಹೊಂಗಲ, ಸವದತ್ತಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಬಂದ್ ಆಗಿದ್ದು, ಇದೀಗ ಸಂಚಾರಕ್ಕೆ ಮುಕ್ತವಾಗಿದೆ. ತಡರಾತ್ರಿವರೆಗೂ ವಾಹನಗಳು, ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದರು.
ಇದನ್ನೂ ಓದಿ: ವಿಜಯಪುರದಲ್ಲಿ ಭಾರಿ ಮಳೆ : ಕೊಚ್ಚಿಕೊಂಡು ಹೋದ ಸೇತುವೆ
ಮಳೆಯಿಂದಾಗಿ ತಾಲೂಕಿನಲ್ಲಿ ಬೈಲಹೊಂಗಲ ಪಟ್ಟಣದ ಹುಡೇದ ಬಾವಿ, ಇಂಚಲ ಕ್ರಾಸ್, ಮುರ್ಕಿಬಾವಿ ರಸ್ತೆ ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದ್ದಲ್ಲದೇ, ಬೈಲಹೊಂಗಲ ಪಟ್ಟಣದಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಸ್ಥಳೀಯರು ಪರದಾಡಿದರು. ಇದಲ್ಲದೇ, ಬೈಲವಾಡದ ಗ್ರಾಮದ ಸುಪ್ರಸಿದ್ಧ ದೇವಸ್ಥಾನ ಬೈಲವಾಡ ವರ್ತಿ ಸಿದ್ಧಬಸವೇಶ್ವರ ದೇವಸ್ಥಾನವೂ ಜಲಾವೃತವಾಗಿದೆ.