ಬೆಳಗಾವಿ: ತಾಲೂಕಿನ ಗೂಡಿಹಾಳ ಗ್ರಾಮದ ಬಳಿ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ್ದ ಕಾಡುಕೋಣ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಆದರೆ ಪಶುವೈದ್ಯರು ಚಿಕಿತ್ಸೆ ನೀಡಿದರೂ ಸಹ ಫಲಿಸದೆ ಕಾಡುಪ್ರಾಣಿ ಕೊನೆಯುಸಿರೆಳೆದಿದೆ. ತಾಲೂಕಿನ ಭೂತರಾಮನಹಟ್ಟಿ ಅರಣ್ಯ ಪ್ರದೇಶದಲ್ಲಿ ಹೊಂದಿಕೊಂಡ ಸುತ್ತಮುತ್ತಲಿನ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಈ ಕಾಡುಕೋಣ ಓಡಾಡುತ್ತಿತ್ತು.
ಭೂತರಾಮನಹಟ್ಟಿ ಬಳಿಯ ಗೂಡಿಹಾಳ್ ಗ್ರಾಮದ ಪಕ್ಕದಲ್ಲಿ ಹಾಯ್ದು ಹೋಗಿರುವ ರಸ್ತೆ ಪಕ್ಕದ ಕಾಡಿನಲ್ಲಿ ಬಳಲಿದಂತೆ ಮಲಗಿಕೊಂಡಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಪಶುವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದ್ದರು. ಇತ್ತ ಕಣ್ಣು ಕಾಣದೇ ಕಾಡಿನಿಂದ ನಾಡಿಗೆ ಬಂದಿದ್ದ ಕಾಡುಕೋಣ ಗೋಡೆಗೆ ಗುದ್ದಿ ತಲೆಗೆ ಗಾಯ ಮಾಡಿಕೊಂಡಿತ್ತು. ಹೀಗಾಗಿ ತೀವ್ರ ಅನಾರೋಗ್ಯಕ್ಕೆ ಸಿಲುಕಿತ್ತು.
ಇದನ್ನು ಓದಿ: ಕಾಡಿನಿಂದ ನಾಡಿಗೆ ಬಂದು ವಿಶ್ರಾಂತಿ ಪಡೆಯುತ್ತಿರುವ ಕಾಡುಕೋಣ: ಜನರಲ್ಲಿ ಹೆಚ್ಚಿದ ಆತಂಕ
ಕಾಡುಕೋಣಕ್ಕೆ ಸರಿಯಾದ ಆಹಾರ ಸಿಗದೇ, ಮುಂದೆ ಹೋಗಲಾಗದೆ ನಿತ್ರಾಣ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಕೊನೆಯುಸಿರೆಳೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡುಕೋಣದ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ.