ಚಿಕ್ಕೋಡಿ: ಜಿಲ್ಲೆಯ ಕೆಲ ಭಾಗಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆ ಸುರಿದ ಪರಿಣಾಮವಾಗಿ ಅಥಣಿ, ಕಾಗವಾಡ, ರಾಯಭಾಗ, ಭಾಗದಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ದನಕರುಗಳಿಗೆ ಮೇವು ಇಲ್ಲದೇ ಸೊರಗಿವೆ. ಇದನೆಲ್ಲ ನೋಡಿದ ರೈತರು ಸರ್ಕಾರಕ್ಕೆ ಈ ಭಾಗದಲ್ಲಿ ಗೋಶಾಲೆ ಪ್ರಾರಂಭಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರೈತರೊಬ್ಬರು ತಾವು ಬೆಳೆದ ಬೆಳೆಯನ್ನು ಕಟಾವು ಮಾಡಿ ಅಕ್ಕಪಕ್ಕದ ಗ್ರಾಮದ ದನಕರುಗಳಿಗೆ ಉಚಿತವಾಗಿ ಮೇವು ವಿತರಣೆ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದ ರೈತ ಶಿವಗೌಡ ಮಸರಗುಪ್ಪಿ ಎಂಬುವರು ತಾವು ಬೆಳೆದ ಬೆಳೆಗಳನ್ನು ದನಕರುಗಳಿಗೆ ಉಚಿತವಾಗಿ ನೀಡಿ ಮೂಕ ಪ್ರಾನಿಗಳ ಹಸಿವನ್ನು ನೀಗಿಸುತ್ತಿದ್ದಾರೆ. ಈ ಭಾಗದಲ್ಲಿ ಮಳೆ ಕೊರತೆಯಿಂದಾಗಿ ಹಲವು ಬೆಳೆಗಳಲ್ಲಿ ಕುಂಠಿತವಾಗಿದೆ ಹಾಗೂ ಭಾಗಶಃ ಬೆಳೆಗಳು ಒಣಗಿ ಹೋಗಿದ್ದರಿಂದ ಸದ್ಯ ಈಗ ಮೇವಿನ ಹಾಹಾಕಾರ ಉಂಟಾಗಿದ್ದು, ಇದರಿಂದ ದನಕರುಗಳಿಗೆ ಮೇವು ಇಲ್ಲದೇ ಬಳಲುವಂತಾಗಿತ್ತು. ಆದರೆ, ರೈತ ಶಿವನಗೌಡ ಯಾವುದೇ ಹಣವನ್ನು ಅಪೇಕ್ಷಿಸದೇ ತಾವು ಬೆಳೆದ ನಾಲ್ಕು ಎಕರೆ ಪ್ರದೇಶದ ಕಬ್ಬು ಬೆಳೆಯನ್ನು ರೈತರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೈತ ಶಿವನಗೌಡ, ‘‘ಈ ಭಾಗದಲ್ಲಿ ಬರಗಾಲದ ಛಾಯೆ ನಿರ್ಮಾಣವಾಗಿದೆ. ಇದರಿಂದ ಸದ್ಯ ಜಾನುವಾರುಗಳಿಗೆ ಮೇವು ಇಲ್ಲದೇ ಇರುವುದರಿಂದ ಪರಿಸ್ಥಿತಿ ಕೈಮೀರಿ ಹೋಗಿದೆ. ವಾಡಿಕೆಯಂತೆ ಮಳೆಯಾಗಿ ಗುಡ್ಡಗಾಡಗಳು ಹಚ್ಚಹಸಿರು ಆಗುತ್ತಿತ್ತು ಇದರಿಂದ ಮೇವಿನ ಕೊರತೆ ಆಗುತ್ತಿರಲಿಲ್ಲ. ಆದರೆ, ಈ ಬಾರಿ ಮಳೆ ಇಲ್ಲದೇ ಇರುವುದರಿಂದ ಬರಗಾಲ ಬಿದ್ದಿದೆ. ದನ ಕರುಗಳಿಗೆ ಮೇವಿಲ್ಲದೇ ಹಸಿವಿನಿಂದ ಬಳಳುವಂತಾಗಿದೆ. ಇದರಿಂದ ನಾನು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬನ್ನು ರೈತರಿಗೆ ಧಾನವಾಗಿ ನೀಡುತ್ತಿದ್ದೇನೆ. ಅದೆಷ್ಟೋ ಜನರು ಹಣ ಬೆಲೆಬಾಳುವ ವಸ್ತುಗಳನ್ನು ನೀಡುತ್ತಾರೆ, ಆದರೆ ನನ್ನ ಕಡೆ ಅದು ಸಾಧ್ಯವಿಲ್ಲ. ಇದರಿಂದ ನಾನು ಬೆಳೆದ ಕಬ್ಬಿನ ಬೆಳೆಯನ್ನು ದನ ಕರುಗಳಿಗೆ ರೈತರಿಗೆ ಒಳ್ಳೆಯದಾಗಲಿ ಎಂದು ಉಚಿತವಾಗಿ ನೀಡುತ್ತಿದ್ದೇನೆ. ಪ್ರತಿ ವರ್ಷ ನನ್ನ ತೋಟದಿಂದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುತ್ತಿದ್ದೆ 3 ರಿಂದ 4 ಲಕ್ಷ ಆದಾಯ ಬರುತ್ತಿತ್ತು. ಆದರೆ, ಈ ವರ್ಷ ಬರಗಾಲ ಬಿದ್ದಿದ್ದರಿಂದ ಈ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಅನಿವಾರ್ಯ‘‘ ಎಂದು ಹೇಳಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಹಾಗೂ ಅಥಣಿಯ ತಾಲೂಕಿನ ದಕ್ಷಿಣ ಭಾಗದಲ್ಲಿ ಕೃಷ್ಣಾ ನದಿ ಹರಿದು ಒಂದು ಕಡೆ ಪ್ರವಾಹ ಸೃಷ್ಟಿ ಮಾಡಿದರೆ, ತಾಲೂಕಿನ ಉತ್ತರ ಪೂರ್ವ ಭಾಗದಲ್ಲಿ ಮಳೆ ಕೊರತೆಯಿಂದ ಇನ್ನು ಬಿತ್ತನೆ ಕಾರ್ಯ ಆಗದೇ ಇರುವುದು ರೈತರಿಗೆ ಹೈನುಗಾರಿಕೆ ಮೇಲೆ ತೀವ್ರ ಪೆಟ್ಟಾಗಿದೆ. ಇದರಿಂದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. 50 ರಿಂದ 60 ಕಿಲೋಮೀಟರ್ ದೂರ ಸಂಚಾರ ಮಾಡಿ ಎರಡು ಪಟ್ಟು ಹಣ ನೀಡಿ ಹಸುಗಳಿಗೆ ಮೇವನ್ನು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ ಈ ಭಾಗದಲ್ಲಿ ಗೋಶಾಲೆ ಪ್ರಾರಂಭಿಸುವಂತೆ ತಹಶೀಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಂಬಿಕೊಂಡು ಉಳಿದು ರೈತರ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟಿದೆ ಎಂದು ರೈತ ಮುಖಂಡ ಪ್ರಕಾಶ್ ಪೂಜಾರಿಯವರು ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಿಕ್ಕೋಡಿ: ಸ್ವಂತ ಬಾವಿಯಿಂದ ನೀರು ಸರಬರಾಜು ಮಾಡಿ ಜನರ ದಾಹ ತೀರಿಸುತ್ತಿರುವ ಆಧುನಿಕ ಭಗೀರಥ...!