ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದನೇ ಹಾಗೂ ಕೊನೆಯ ಗ್ಯಾರಂಟಿಯಾದ 'ಯುವನಿಧಿ' ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ನೋಂದಣಿ ಆರಂಭವಾಗಿ 7 ದಿನ ಕಳೆದಿದ್ದು, ಈವರೆಗೆ 19,800 ಅರ್ಜಿಗಳು ಬಂದಿವೆ.
ಡಿಸೆಂಬರ್ 26ರಂದು ಸಿಎಂ ಸಿದ್ದರಾಮಯ್ಯ ಯುವನಿಧಿ ಯೋಜನೆಯ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಈ ಯೋಜನೆಯಡಿ ಪದವಿ, ಡಿಪ್ಲೊಮಾ ಶಿಕ್ಷಣ ಪಡೆದು 6 ತಿಂಗಳಾದರೂ ಉದ್ಯೋಗ ದೊರೆಯದಿದ್ದರೆ, ಗರಿಷ್ಠ 2 ವರ್ಷದವರೆಗೆ ಪದವೀಧರರಿಗೆ 3 ಸಾವಿರ ರೂಪಾಯಿ ಹಾಗೂ ಡಿಪ್ಲೊಮಾ ಪಡೆದವರಿಗೆ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದ ಪದವೀಧರರನ್ನು ಯೋಜನೆಗೆ ಅರ್ಹರನ್ನಾಗಿ ಪರಿಗಣಿಸಲಾಗಿದೆ.
ಈ ಯೋಜನೆ ವೆಚ್ಚವಾಗಿ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 250 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಮುಂದಿನ ಆರ್ಥಿಕ ವರ್ಷಕ್ಕೆ 1,250 ಕೋಟಿ ರೂಪಾಯಿ ವೆಚ್ಚದ ಅಂದಾಜು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬೇಕಿದೆ. ಜನವರಿ 12ರಂದು ಅರ್ಹ ಅರ್ಜಿದಾರರ ಖಾತೆಗೆ ನಿರುದ್ಯೋಗ ಭತ್ಯೆಯನ್ನು ಜಮೆ ಮಾಡುವ ಸಾಧ್ಯತೆ ಇದೆ.
ಕೌಶಲ್ಯಾಭಿವೃದ್ಧಿ ಇಲಾಖೆ ನೀಡಿದ ಅಂಕಿಅಂಶದಂತೆ ಯುವನಿಧಿಗೆ ನೋಂದಣಿ ಆರಂಭವಾಗಿ 7 ದಿನ ಕಳೆದಿದೆ. ಡಿ.26ರಿಂದ ಜ.1ರ ಸಂಜೆಯವರೆಗೆ ಸೇವಾಸಿಂಧು ಪೋರ್ಟಲ್ ಮೂಲಕ ರಾಜ್ಯಾದ್ಯಂತ 19,800 ಅರ್ಜಿಗಳು ಮಾತ್ರ ಬಂದಿವೆ. ನಿರುದ್ಯೋಗಿಗಳಿಂದ ದೊಡ್ಡ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಬಹುದು ಎಂದು ಸರ್ಕಾರ ನಿರೀಕ್ಷಿಸಿತ್ತು.
ಇದಕ್ಕೂ ಮೊದಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿಗಳ ಪೈಕಿ ನಾಲ್ಕನ್ನು ಜಾರಿ ಮಾಡಿದಾಗ, ಜನರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿತ್ತು. ಗ್ಯಾರಂಟಿಗಳಿಗಾಗಿ ದೊಡ್ಡ ಮಟ್ಟದಲ್ಲಿ ನೋಂದಣಿ ಕಾರ್ಯ ನಡೆದಿತ್ತು. ಸರ್ವರ್ ಡೌನ್ ಆಗುವಷ್ಟರ ಮಟ್ಟಿಗೆ ನೋಂದಣಿ ಕಾರ್ಯ ಸಾಗಿತ್ತು. ಆದರೆ, ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಗೆ ಅಷ್ಟಾಗಿ ಸ್ಪಂದನೆ ಸಿಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಸರ್ಕಾರ ಗುರುತಿಸಿದ ಫಲಾನುಭವಿಗಳೆಷ್ಟು?: 2022-23ರಲ್ಲಿ ತೇರ್ಗಡೆಯಾದ 5.3 ಲಕ್ಷ ಪದವೀಧರರು ಹಾಗೂ ಡಿಪ್ಲೋಮಾ ಪಡೆದವರನ್ನು ಯೋಜನೆಗೆ ಅರ್ಹರು ಎಂದು ರಾಜ್ಯ ಸರ್ಕಾರ ಗುರುತಿಸಿದೆ. ಇದರಲ್ಲಿ ಸುಮಾರು 4.8 ಲಕ್ಷ ಪದವೀಧರರು ಹಾಗೂ 48,100 ಡಿಪ್ಲೋಮಾ ಪಡೆದವರು ಇದ್ದಾರೆ. ಏಳು ದಿನಗಳಲ್ಲಿ ಕೇವಲ 19,800 ನೋಂದಣಿಯಾಗಿದೆ. ಆ ಮೂಲಕ ಒಟ್ಟು ಗುರುತಿಸಲ್ಪಟ್ಟ ಪದವೀಧರರು, ಡಿಪ್ಲೊಮಾ ಪಡೆದವರ ಪೈಕಿ ಕೇವಲ 4% ಮಂದಿ ಮಾತ್ರ ಅರ್ಜಿ ಹಾಕಿದ್ದಾರೆ.
ಯುವನಿಧಿಗಾಗಿ ಡಿ.27ರಂದು 2,032 ಅರ್ಜಿಗಳು ಸಲ್ಲಿಕೆಯಾಗಿದ್ದವು. 28ರಂದು 6,062, 29ಕ್ಕೆ 10,834, 30ರಂದು 14,071, ಜನವರಿ 1ರ ಸಂಜೆವರೆಗೆ ಒಟ್ಟು 19,800 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಇಲಾಖೆ ಮಾಹಿತಿ ನೀಡಿದೆ. ಅಂದರೆ ಕಳೆದ 7 ದಿನಗಳಲ್ಲಿ ರಾಜ್ಯಾದ್ಯಂತ ನಿತ್ಯ ಸರಾಸರಿ 4 ಸಾವಿರದ ಆಸುಪಾಸು ಅರ್ಜಿ ಸಲ್ಲಿಕೆಯಾಗಿವೆ. ಸಲ್ಲಿಕೆಯಾದ ಅರ್ಜಿಗಳ ಪೈಕಿ ನಿಯಮಿತ ಅರ್ಜಿಗಳನ್ನು ಮಾತ್ರ ಅಂತಿಮಗೊಳಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಅರ್ಜಿ?: ಅರ್ಜಿ ಸಲ್ಲಿಸಿದ ಜಿಲ್ಲೆವಾರು ಪೈಕಿ ಬೆಳಗಾವಿ ಮುಂದಿದೆ. 2,316 ಅರ್ಜಿಗಳು ಈವರೆಗೂ ಸಲ್ಲಿಕೆಯಾಗಿವೆ. ಬಳಿಕ ಬೆಂಗಳೂರು ನಗರ ಜಿಲ್ಲೆಯಲ್ಲಿ 1,974 ಮಂದಿ, ರಾಯಚೂರಿನಲ್ಲಿ 1,126, ಬಾಗಲಕೋಟೆಯಲ್ಲಿ 1,109, ವಿಜಯಪುರದಲ್ಲಿ 973, ತುಮಕೂರಿನಲ್ಲಿ 904 ಅರ್ಜಿಗಳು ಸಲ್ಲಿಕೆಯಾಗಿವೆ.
ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ 54 ಅರ್ಜಿ ಸಲ್ಲಿಕೆಯಾಗಿದ್ದರೆ, ಚಾಮರಾಜನಗರ ಜಿಲ್ಲೆಯಿಂದ 95, ಧಾರವಾಡ 820, ಕಲಬುರ್ಗಿಯಿಂದ 800, ಶಿವಮೊಗ್ಗ 844, ಬಳ್ಳಾರಿ 675, ಕೊಪ್ಪಳ 638, ಚಿಕ್ಕಬಳ್ಳಾಪುರ 554, ಬೀದರ್ 544, ಉತ್ತರ ಕನ್ನಡ 482, ಚಿಕ್ಕಮಗಳೂರು 474, ದಾವಣಗೆರೆ 457, ಮೈಸೂರು 377 ಅರ್ಜಿ, ಬೆಂಗಳೂರು ಗ್ರಾಮಾಂತರ 330, ಹಾಸನ 311, ಮಂಡ್ಯ 292 ಅರ್ಜಿ, ದಕ್ಷಿಣ ಕನ್ನಡ 170, ಉಡುಪಿಯಿಂದ 101 ಅರ್ಜಿಗಳು ಬಂದಿವೆ.
ಇದನ್ನೂ ಓದಿ: ಯುವನಿಧಿ ನೋಂದಣಿಗೆ ಚಾಲನೆ: ಐದೂ ಗ್ಯಾರಂಟಿ ಜಾರಿ ಮಾಡಿದ್ದೇವೆ, ರಾಜ್ಯ ದಿವಾಳಿಯಾಗಿಲ್ಲ; ಸಿದ್ದರಾಮಯ್ಯ