ಬೆಂಗಳೂರು : ಸರ್, ವೈಎಸ್‌ವಿ ದತ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ವೈಎಸ್‌ವಿ ದತ್ತ ಬೆಂಬಲಿಗರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ ಪ್ರಸಂಗ ನಡೆಯಿತು.
ರಾಗಿ ಬೆಳೆಗಾರರ ಸಮಸ್ಯೆ ಕುರಿತಾಗಿ ರೈತರ ನಿಯೋಗದ ಜೊತೆ ವೈಎಸ್‌ವಿ ದತ್ತ ಸೋಮವಾರ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ವೇಳೆ ದತ್ತ ಬೆಂಬಲಿಗರು ಸರ್.. ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದರು. ಈ ವೇಳೆ ದತ್ತ ಅವರು ಸುಮ್ಮನಿರುವಂತೆ ಅಭಿಮಾನಿಗಳಿಗೆ ಸೂಚಿಸಿದರು.
ಬಳಿಕ ವೈಎಸ್‌ವಿ ದತ್ತ ಮಾತನಾಡಿ, ರಾಗಿ ರೈತರ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಅವರ ಜೊತೆ ಮಾತಾಡಲು ಬಂದಿದ್ದೆ. ವಿಧಾನಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲು ಮನವಿ ಮಾಡಿದ್ದೇನೆ ಎಂದರು.
ಈ ವೇಳೆ ಸಿದ್ದರಾಮಯ್ಯ ಭೇಟಿ ವೇಳೆ ಬೆಂಬಲಿಗರ ಮನವಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅಭಿಮಾನದಿಂದ ಅವರು ಹಾಗೆ ಹೇಳಿದ್ದಾರೆ ಎಂದರು. ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ನಾನು ಈ ಬಗ್ಗೆ ಈಗಲೇ ಏನೂ ಮಾತನಾಡಲ್ಲ. ಮೌನ.. ಮೌನ ಎಂದಷ್ಟೇ ಉತ್ತರಿಸಿದರು.