ಬೆಂಗಳೂರು: ನಗರದ ನ್ಯೂ ತರಗುಪೇಟೆಯಲ್ಲಿ ನಾಲ್ಕು ದಿನಗಳ ಹಿಂದೆ ನಡೆದಿದ್ದ ನೇಪಾಳ ಮೂಲದ ಯುವಕ ರಮೇಶ್ ಕೊಲೆ ಪ್ರಕರಣ ಬೇಧಿಸಿದ ವಿ.ವಿ.ಪುರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಶ್ರೀನಿವಾಸ್ ಹಾಗೂ ಸತೀಶ್ ಬಂಧಿತರು. ಇವರು ತರಗುಪೇಟೆಯಲ್ಲಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದರು. ಮೃತ ರಮೇಶ್ ನೇಪಾಳ ಮೂಲದವನಾಗಿದ್ದು ಈತನ ಮಾವ ರತನ್ ಎವರ ಜೊತೆ ತೋಟಗಳಿಗೆ ಗ್ರೀನ್ ಮೆಸ್ ಹಾಕುವ ಬಿಸ್ನೆಸ್ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ.
ತೋಟಗಳಿಗೆ ಗ್ರೀನ್ ಮೆಸ್ ಹಾಕುವ ಸಲಕರಣೆ ತರಲು ಇದೇ ತಿಂಗಳು 27ರಂದು ಮಾರ್ಕೆಟ್ಗೆ ಸ್ನೇಹಿತ ಇಂದ್ರೇಶ್‌ನೊಂದಿಗೆ ಬಂದಿದ್ದನು. ಕೆಲಸ ಮುಗಿಸಿ ಮದ್ಯ ಸೇವನೆಗೆ ನ್ಯೂ ತರಗುಪೇಟೆಯಲ್ಲಿರುವ ಬಾರ್‌ಗೆ ಬಂದಿದ್ದರು. ಇಬ್ಬರು ಮದ್ಯ ಸೇವನೆ ಮಾಡುವಾಗ ಅದೇ ಬಾರ್‌ನಲ್ಲಿದ್ದ ಆರೋಪಿಗಳು ಗಾಂಜಾ ಸೇವನೆ ಮಾಡುವುದನ್ನು ರಮೇಶ್ ಗಮನಿಸಿದ್ದಾನೆ.
ಗಾಂಜಾ ಪಡೆಯಲು ಅವರನ್ನು ಹಿಂಬಾಲಿಸಿ 500 ರೂ ಕೊಡುತ್ತೇನೆ. ಮಾದಕ ವಸ್ತು ಕೊಡಿ ಎಂದು ಕೇಳಿದ್ದಾನೆ. ಆರೋಪಿಗಳು ಗಾಂಜಾ ಇಲ್ಲ ಎಂದರೂ ಕೇಳದ ರಮೇಶ್, ಪದೇ ಪದೇ ಪೀಡಿಸಿದ್ದಾನೆ. ನಶೆಯಲ್ಲಿದ್ದ ಆರೋಪಿಗಳು ಬಿಯರ್ ಬಾಟಲ್‌ನಿಂದ ರಮೇಶ್ ಕುತ್ತಿಗೆಗೆ ಇರಿದು ಪರಾರಿಯಾಗಿದ್ದರು.
ರಮೇಶ್ ಜತೆಗಿದ್ದ ಇಂದ್ರೇಶ್ ಘಟನೆಯ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ನನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದನು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿಟಿವಿ ಆಧರಿಸಿ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂಓದಿ: ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ!