ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣ ಸಂಬಂಧ ವಾದ ಮಂಡಿಸಿ ನ್ಯಾಯಾಲಯದಿಂದ ಹೊರಬಂದ ವಕೀಲರೊಬ್ಬರ ಮೇಲೆ ಹಲ್ಲೆ ನಡೆದಿದೆ. ಇಂದು ಮಧ್ಯಾಹ್ನ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲೇ ಘಟನೆ ನಡೆಯಿತು. ವಕೀಲ ಕೃಷ್ಣಾರೆಡ್ಡಿ ಹಲ್ಲೆಗೊಳಗಾಗಿದ್ದಾರೆ. ಕಾಂಚನಾ ಎಂಬವರ ಮೇಲೆ ಅವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾರಣವೇನು?: ಪೀಣ್ಯದ ನಿವಾಸಿ ಹರೀಶ್ ಕಳೆದ ನಾಲ್ಕು ವರ್ಷಗಳ ಹಿಂದೆ ಪರಿಚಯಸ್ಥೆ ಕಾಂಚನ ಎಂಬವರಿಗೆ ನಾಲ್ಕು ಲಕ್ಷ ಹಣ ಕೈ ಸಾಲ ಕೊಟ್ಟಿದ್ದರು. ನಾಲ್ಕು ವರ್ಷಗಳಾದರೂ ಸಾಲ ಮರು ಪಾವತಿಸಿರಲಿಲ್ಲ. ಹಲವು ಸುತ್ತಿನ ಮಾತುಕತೆ ನಡೆಸಿ ಚೆಕ್ ನೀಡಿದ್ದರು. ಚೆಕ್ ಬೌನ್ಸ್ ಆಗಿತ್ತು. ಹರೀಶ್ ತಮ್ಮ ವಕೀಲ ಕೃಷ್ಣಾರೆಡ್ಡಿ ಮೂಲಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಾಲಯದಲ್ಲಿ ಇಂದು ವಾದ-ಪ್ರತಿವಾದ ನಡೆದು ಮೇ 8ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿತ್ತು. ಕಲಾಪ ಮುಗಿಸಿ ಹೊರಬಂದ ಕೃಷ್ಣಾರೆಡ್ಡಿ, ಪ್ರತಿವಾದಿಯಾಗಿದ್ದ ಕಾಂಚನಾ, ನನ್ನ ವಿರುದ್ಧ ಕೇಸ್ ಮುಂದುವರೆಸುತ್ತೀಯಾ ಎಂದು ಹೇಳಿ ಮಾತಿನ ಚಕಮಕಿ ನಡೆಸಿದ್ದಾರೆ. ನೋಡು ನೋಡುತ್ತಿದ್ದಂತೆ ಇಬ್ಬರ ನಡುವೆ ಸಂಘರ್ಷ ಹೆಚ್ಚಾಗಿದೆ. ಈ ವೇಳೆ ಚಾಕುವಿನಿಂದ ಕೃಷ್ಣಾರೆಡ್ಡಿ ಅವರ ಕಣ್ಣಿನ ಮೇಲ್ಬಾಗಕ್ಕೆ ಚುಚ್ಚಿದ್ದಾರೆ. ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಕೋರ್ಟ್ನಲ್ಲಿ ವಕೀಲರ ಸೋಗಿನಲ್ಲಿದ್ದ ದುಷ್ಕರ್ಮಿಯಿಂದ ಫೈರಿಂಗ್: ಮಹಿಳೆಗೆ ಗುಂಡೇಟು