ಬೆಂಗಳೂರು: ಎಲ್ಲಾ ಮಕ್ಕಳು ಶಿಕ್ಷಣ ಪಡೆಯಬೇಕು, ಸರ್ಕಾರಿ ಶಾಲೆಗಳಿಗೆ ಹೆಚ್ಚು ಬರಬೇಕು. ಹಾಗಾಗಿ, ರಾಜ್ಯದಲ್ಲಿ ಸುಮಾರು 3ಸಾವಿರ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 2024-25ರ ವೇಳೆಗೆ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಹಾಗಾಗಿ, ಗ್ರಾಮಾಂತರ ಭಾಗದಲ್ಲಿ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಮೂರು ವರ್ಷದಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಹ ಒಪ್ಪಿಗೆ ಕೊಟ್ಟಿದ್ದಾರೆ. ಸಿಎಸ್ಆರ್ ಯೋಜನೆಯಡಿ ಹಣ ಲಭ್ಯವಾಗಲಿದೆ. ಇದಕ್ಕೆ 600 ಕೋಟಿ ರೂಪಾಯಿ ಖರ್ಚು ಬರಬಹುದು. ಅಜೀಂ ಪ್ರೇಂಜಿ ಫೌಂಡೇಷನ್ ಕೂಡ ಮಾತುಕತೆ ನಡೆಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸೌಲಭ್ಯ ಸಿಗಬಹುದು. ಮೂಲ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಸಿಗಬಹುದು ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆಗಳ ಗುಣಮಟ್ಟ ಚೆನ್ನಾಗಿದೆ. ದೆಹಲಿಯಲ್ಲಿ ಇದು ವರ್ಕೌಟ್ ಆಗಿದೆ. ರಾಜ್ಯದಲ್ಲಿ ಎರಡು ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಕೆಲವೊಂದು ಕಡೆ ಕನ್ವರ್ಟ್ ಮಾಡುವ ಪ್ರಯತ್ನವಿದೆ. ಇರುವ ಶಾಲೆಗಳನ್ನ ಕನ್ವರ್ಟ್ ಮಾಡುವ ಚಿಂತನೆಯೂ ಇದೆ ಎಂದು ಹೇಳಿದರು.
ನಮ್ಮ ಇಲಾಖೆ ದೊಡ್ಡದು. ಅಷ್ಟೇ ಸಮಸ್ಯೆಗಳೂ ಇಲಾಖೆಯಲ್ಲಿವೆ. ಸರ್ಕಾರ ರಚನೆಯಾಗಿ ಆರು ತಿಂಗಳಾಯ್ತು. ಜಿಲ್ಲಾವಾರು ಪ್ರಗತಿ ಪರಿಶೀಲನಾ ಸಭೆ ಮಾಡಿದ್ದು, ಡಿಸೆಂಬರ್ನೊಳಗೆ ಎಲ್ಲಾ ಜಿಲ್ಲೆಗಳಲ್ಲೂ ಇದನ್ನು ಮುಗಿಸುತ್ತೇನೆ. 1 ರಿಂದ 10 ನೇ ತರಗತಿ ಹಾಗೂ ಪಿಯುಸಿವರೆಗೆ ಸಭೆ ನಡೆಸಿದ್ದೇನೆ. ಕೆಲವು ಕಾರ್ಯಕ್ರಮ ಸ್ಥಗಿತಗೊಂಡಿದ್ದವು. ವಿಧಾನಸಭೆ ಅಧಿವೇಶನ ಕೂಡ ಹತ್ತಿರವಾಗ್ತಿದೆ. ಅಷ್ಟರಲ್ಲೇ ಸಮಸ್ಯೆ ಸರಿಪಡಿಸುವ ಪ್ರಯತ್ನ ನಡೆದಿದೆ. ಪ್ರಸ್ತುತ ನನಗೆ ತೃಪ್ತಿಯನ್ನು ತಂದಿದೆ ಎಂದರು.
ಶಿಕ್ಷಕರ ಕೊರತೆ ನೀಗಿಸುತ್ತೇವೆ: ಶಿಕ್ಷಕರ ಕೊರತೆ ಹೆಚ್ಚು ಇದೆ. ಮಕ್ಕಳು ಹೆಚ್ಚಿದ್ದಾರೆ, ಅಗತ್ಯ ಶಿಕ್ಷಕರಿಲ್ಲ. ಹೈದರಾಬಾದ್ ಕರ್ನಾಟಕ ಸೇರಿದಂತೆ 13 ಸಾವಿರ ಶಿಕ್ಷಕರ ನೇಮಕ ಆಗುತ್ತಿದೆ. ಕೋರ್ಟ್ ವಿಚಾರಣೆಗಳು ಕೂಡ ಇದ್ದವು. ಹಾಗಾಗಿ ನೇಮಕಾತಿಯಲ್ಲಿ ಸಮಸ್ಯೆಯಾಗಿತ್ತು. ಶಿಕ್ಷಕರ ಕೊರತೆ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ. ಇದರ ಜೊತೆ ಮೂಲಸೌಕರ್ಯಗಳು ಆಗಬೇಕಿದೆ ಎಂದು ಹೇಳಿದರು.
ಶೌಚಾಲಯ, ಕಾಂಪೌಂಡ್ ಸಮಸ್ಯೆ: ಮಳೆಯಿಂದಾಗಿ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಹೆಚ್ಚಿವೆ. ಶೌಚಾಲಯ, ಕಾಂಪೌಂಡ್ ಸಮಸ್ಯೆಗಳಿವೆ. ಇದನ್ನು ಸರಿಪಡಿಸುವ ಕೆಲಸ ನಡೆದಿದೆ. 7,500 ಕೊಠಡಿಗಳ ನಿರ್ಮಾಣ ಆಗಬೇಕಿದೆ. ಸುಮಾರು 500 ಕ್ಕೂ ಹೆಚ್ಚು ಶಾಲಾ ಕೊಠಡಿ ನವೀಕರಣ ಆಗಬೇಕಿದೆ. 7,300 ಶೌಚಾಲಯಗಳ ನಿರ್ಮಾಣ ಮಾಡಬೇಕಿದೆ. ಅಡುಗೆ ಮನೆ ರಿಪೇರಿ ಕಾರ್ಯ ನಡೆದಿದೆ. ಮಧ್ಯಾಹ್ನದ ಬಿಸಿಯೂಟ ಉತ್ತಮವಾಗಿದೆ. ಯಾವುದೇ ಕಳಪೆ ಇಲ್ಲದೆ ನಡೆದಿದೆ ಎಂದು ಸಚಿವರು ತಿಳಿಸಿದರು.
ಮೊಟ್ಟೆ ವಿತರಣೆ: ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆ ನೀಗಿಸಲು ಈಗ ಮೊಟ್ಟೆಯನ್ನು ನೀಡಲಾಗುತ್ತಿದೆ. ಮುಂದಿನ ತಿಂಗಳಿಂದ ರಾಗಿ ಮಾಲ್ಟ್ ನೀಡಲಾಗುತ್ತದೆ. ಎನ್ಜಿಓ ಜೊತೆ ಈಗಾಗಲೇ ಮಾತುಕತೆ ನಡೆದಿದೆ ಎಂದ ಸಚಿವರು, ಕ್ಷೀರಭಾಗ್ಯ ಉತ್ತಮವಾಗಿ ನಡೆದಿದೆ. ಸಂವಿಧಾನ ಪೀಠಿಕೆ ಎಲ್ಲ ಕಡೆ ಹಾಕಲಾಗಿದೆ ಎಂದು ಹೇಳಿದರು.
ಶಿಕ್ಷಕರನ್ನು ನಾವು ತಯಾರು ಮಾಡಬೇಕಿದೆ. ಇರುವ ಶಿಕ್ಷಕರು 20-30 ವರ್ಷಗಳಿಂದ ಇದ್ದಾರೆ. ಈಗ ಬರುತ್ತಿರುವ ಶಿಕ್ಷಕರು ತಿಳಿದಿರುತ್ತಾರೆ. ಅವರಿಗೆ ಮತ್ತಷ್ಟು ಶಿಕ್ಷಣ ಕೌಶಲ್ಯ ಕಲಿಸಬೇಕಿದೆ. ಅದಕ್ಕಾಗಿ ತರಬೇತಿಗಳು ನಡೆದಿವೆ. ಶಾಲಾ ಮೈದಾನಗಳ ಸ್ವಚ್ಛತೆಗೂ ಗಮನ ಹರಿಸುತ್ತೇವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಶಿಕ್ಷಣ ಇಲಾಖೆ ಪರೀಕ್ಷೆಗೆ ಹಿಜಾಬ್ ಧರಿಸುವ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಇದು ಕೋರ್ಟ್ನಲ್ಲಿರುವುದರಿಂದ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯ ವೈರಲ್ ವಿಡಿಯೋ ನೋಡಿಲ್ಲ, ಕೇಳಿಲ್ಲ: ಸಚಿವ ಡಾ.ಎಚ್ ಸಿ.ಮಹಾದೇವಪ್ಪ