ಬೆಂಗಳೂರು: 'ಹೋಂ ಐಸೋಲೇಷನ್' ನಲ್ಲಿರುವ ಸೋಂಕಿತ ವ್ಯಕ್ತಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇದ್ದರೆ, ಆತ ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿದ್ದರೆ ಆ ವ್ಯಕ್ತಿಯು ಈ ವ್ಯವಸ್ಥೆಯನ್ನ ಪಡೆಯಬಹುದಾಗಿದೆ.
ಅಂದಹಾಗೇ, ಈ ಹಿಂದೆ ಎರಡನೇ ಅಲೆ ಬಂದಾಗ ಸೋಂಕು ಹರಡುವಿಕೆ ಹೆಚ್ಚಾದಾಗ, ಆಸ್ಪತ್ರೆಯಲ್ಲಿ ಬೆಡ್ಗಳ ಕೊರತೆ ಉಂಟಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಗಳಿಗೆ ಬೆಡ್ ಸಿಗದೇ ಪರದಾಡಬೇಕಾಯ್ತು. ಇದನ್ನ ತಪ್ಪಿಸಲು ಸರ್ಕಾರ ಜಾರಿ ಮಾಡಿದ್ದೇ, ಈ ಹೋಂ ಐಸೋಲೇಷನ್ ವ್ಯವಸ್ಥೆ. ಅಂದ್ರೆ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುವುದು.
ಇದನ್ನೂ ಓದಿ: ಬೆಂಗಳೂರಿನಲ್ಲಿ 15,617 ಜನರಿಗೆ ಕೋವಿಡ್.. ಗೌರವ್ ಗುಪ್ತಾ ಹೇಳಿದ್ದೇನು?
ಈ ಹೋಂ ಐಸೋಲೇಷನ್ ವ್ಯವಸ್ಥೆಯಡಿ ಸೋಂಕಿತರು ಚಿಕಿತ್ಸೆ ಪಡೆಯಬೇಕು ಅಂದ್ರೆ ಹಲವು ನಿಯಮಗಳಿವೆ. ಹೋಂ ಐಸೋಲೇಷನ್‌ನಡಿಯಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರ ಮನೆಯಲ್ಲಿ ಉತ್ತಮ ಗಾಳಿ ವ್ಯವಸ್ಥೆ, ಪ್ರತ್ಯೇಕ ಕೊಠಡಿ ಮತ್ತು ಪ್ರತ್ಯೇಕ ಶೌಚಾಲಯ ಇರಬೇಕು. ಹಾಗೆ ಸೋಂಕಿತರು ಮನೆಯ ಇತರ ವ್ಯಕ್ತಿಗಳಿಂದ ದೂರವಿರಬೇಕು. ವಿಶೇಷವಾಗಿ ವಯಸ್ಸಾದವರು, ಅಧಿಕ ರಕ್ತದೊತ್ತಡ, ಹೃದಯ ರಕ್ತನಾಳದ ಕಾಯಿಲೆ, ಮೂತ್ರಪಿಂಡ ಕಾಯಿಲೆ ಮತ್ತು ಕೋಮಾರ್ಬಿಡ್ ಪರಿಸ್ಥಿತಿಯಲ್ಲಿ ಇರುವವರಿಂದ ದೂರವಿರಬೇಕು.
ಚಿಕಿತ್ಸೆ ಹೇಗೆ:
ಅಂದಹಾಗೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹೋಂ ಐಸೋಲೇಷನ್‌ನಲ್ಲಿರುವ ಪ್ರತಿ ಸೋಂಕಿತರ ಮನೆ ಮನೆಗೂ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿ, ಮೆಡಿಕಲ್ ಕಿಟ್ನನ್ನು ಅಧಿಕಾರಿಗಳು ವಿತರಿಸಬೇಕು. ಟೆಲಿ ಮಾನಿಟರ್ ಮೂಲಕ ಆಗಾಗ್ಗೆ ಆರೋಗ್ಯ ವಿಚಾರಿಸುವ ಜವಾಬ್ದಾರಿ ಆಸ್ಪತ್ರೆ ಸಿಬ್ಬಂದಿಯದ್ದು. ಒಂದು ವೇಳೆ ಸೋಂಕಿತ ವ್ಯಕ್ತಿಗೆ ಆರೋಗ್ಯದಲ್ಲಿ ಏರುಪೇರಾದರೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಬೇಕು.
ಹೋಂ ಐಸೋಲೇಷನ್ ಹೇಗೆ ಇರುತ್ತೆ?
ಸೋಂಕು ದೃಢಪಟ್ಟವರಿಗೆ ಬಿಬಿಎಂಪಿ ವಾರ್ ರೂಂನಿಂದ ಫೋನ್ ಕಾಲ್ ಮೂಲಕ ಆರೋಗ್ಯ ವಿಚಾರಿಸುತ್ತಾರೆ. ಹೋಂ ಐಸೋಲೇಷನ್ಗೆ ಒಪ್ಪಿದ್ದರೆ ಆರೋಗ್ಯ ಸಹಾಯಕರ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಸರ್ಕಾರದ ಮಾನದಂಡದಂತೆ ಎಲ್ಲ ಅನುಕೂಲ ಇದ್ದರೆ ಅನುಮತಿಯನ್ನ ನೀಡುತ್ತಾರೆ. ಒಂದು ವೇಳೆ ಪ್ರತ್ಯೇಕ ರೂಮ್, ಬಾತ್ ರೂಮ್ ಇಲ್ಲದೇ ಇದ್ದರೆ ಕೋವಿಡ್ ಕೇರ್ ಸೆಂಟರ್‌ಗೆ ಶಿಫಾರಸು ಮಾಡುತ್ತಾರೆ.
ಹೋಂ ಐಸೋಲೇಷನ್ ಇರೋರಿಗೆ 10 ದಿನಗಳಿಗೆ ವಿಟಮಿನ್ ಸಿ ಮತ್ತು ಜಿಂಕ್ ಮಾತ್ರೆ ನೀಡಿ, ಏನೆಲ್ಲಾ ಮಾಡಬೇಕು ಎಂಬುದರ ಕುರಿತು ಮಾಹಿತಿ ನೀಡುತ್ತಾರೆ. ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಅಂದರೆ ಸ್ಯಾಚುರೇಷನ್, ಪಲ್ಸ್ ಆಕ್ಟಿಮೀಟರ್ ವರದಿ 93ಕ್ಕಿಂತಲೂ ಹೆಚ್ಚಿರಬೇಕು. ಒಂದು ವೇಳೆ ಇದು ಕಡಿಮೆಯಾದರೆ ಆಸ್ಪತ್ರೆಗೆ ತೆರಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಕ್ರಮ, ಲಘು ವ್ಯಾಯಾಮ ಮಾಡಬೇಕು.