ಬೆಂಗಳೂರು: ಕೊರೊನಾ ಸೋಂಕಿನ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ನಗರದ ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಜಾಹೀರಾತು ಹೋರ್ಡಿಂಗ್ಸ್ಗಳಲ್ಲಿ ಹತ್ತಿ ಬಟ್ಟೆಯನ್ನು ಉಪಯೋಗಿಸುತ್ತೇವೆ ಎಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಕೊರೊನಾ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಗತ್ಯವಿದ್ದು ಅದಕ್ಕಾಗಿ ರಾಜ್ಯಾದ್ಯಂತ ಜಾಹೀರಾತು ಹೋರ್ಡಿಂಗ್ಸ್ ಅಳವಡಿಸಲು ಅನುಮತಿ ನೀಡುವಂತೆ ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ, ಹೋರ್ಡಿಂಗ್ಸ್ನಲ್ಲಿ ಯಾವ ಪರಿಕರಗಳನ್ನು ಬಳಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರಿಗೆ ಸೂಚಿಸಿತ್ತು.
ಮಂಗಳವಾರ ಅರ್ಜಿ ವಿಚಾರಣೆ ನಡೆದ ವೇಳೆ ಹೋರ್ಡಿಂಗ್ಸ್ನಲ್ಲಿ ಹತ್ತಿ ಬಟ್ಟೆಗಳನ್ನು ಬಳಸಲಾಗುತ್ತದೆ. ಕೊರೊನಾ ಸೋಂಕು ನಿವಾರಣೆಯಾದ ಮೇಲೆ ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಯಾವುದೇ ಸಂಸ್ಥೆಯ ಅಥವಾ ಖಾಸಗಿ ವ್ಯಕ್ತಿಗಳ ಪ್ರಯೋಜಕತ್ವ ಪಡೆಯುವುದಿಲ್ಲ. ಜಾಹಿರಾತಿಗಾಗಿ ಸರ್ಕಾರ 49. 5 ಕೋಟಿ ರೂಪಾಯಿ ಹಣವನ್ನು ಬಿಬಿಎಂಪಿಯಲ್ಲಿ ಇರಿಸಲು ಸಿದ್ಧವಿದೆ ಎಂದು ಸರ್ಕಾರದ ಪರ ವಕೀಲರು ಪೀಠಕ್ಕೆ ವಿವರಣೆ ನೀಡಿದರು.
ಸರ್ಕಾರಿ ವಕೀಲರ ವಾದ ಪರಿಗಣಿಸಿದ ಪೀಠ, ಜಾಹೀರಾತು ಹೋರ್ಡಿಂಗ್ಸ್ಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಮತ್ತು ಕೊರೊನಾ ಹೊರತುಪಡಿಸಿ ಬೇರಾವುದೇ ಜಾಹೀರಾತಿಗೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ದೃಢಪಡಿಸಿ ಮೆಮೋ ಸಲ್ಲಿಸಲಿ. ಅದನ್ನು ಪರಿಶೀಲಿಸಿದ ನಂತರ ಮುಂದಿನ ಆದೇಶ ಮಾಡುತ್ತೇವೆ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.