ಬೆಂಗಳೂರು: ನಗರದಲ್ಲಿ ಈ ಸಾರಿ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ವಿಭಾಗ, 63 ಉಪ ವಿಭಾಗದಲ್ಲಿ ವಾರದ ಏಳೂ ದಿನ 24 ಗಂಟೆ ಕಾರ್ಯನಿರ್ವಣೆ, ಕೇಂದ್ರ ನಿಯಂತ್ರಣ ಕೊಠಡಿಯಲ್ಲಿ ಮೂರು ಶಿಫ್ಟ್ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಗರದಲ್ಲಿ ಒಟ್ಟು 63 ನಿಯಂತ್ರಣ ಕೊಠಡಿ ನಿರ್ಮಿಸಿದ್ದೇವೆ. ಅರಣ್ಯ ಇಲಾಖೆಗೂ ಸೂಚಿಸಿದ್ದು, 21 ತಂಡ ರಚಿಸಲಾಗಿದೆ ಎಂದರು.
ರಸ್ತೆ ಗುಂಡಿ ಮುಚ್ಚಲು ಪ್ರತಿ ವಲಯ ಮುಖ್ಯ ಎಂಜಿನಿಯರ್ಗೆ ಸೂಚನೆ ನೀಡಿದ್ದೇವೆ. ಈ ಸಾರಿ ನ್ಯಾಯಾಲಯದಿಂದ ಹೇಳಿಸಿಕೊಳ್ಳುವ ಸ್ಥಿತಿಗೆ ತಲುಪದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದ್ದೇನೆ. ಭರವಸೆ ಸಿಕ್ಕಿದೆ. ನಗರದ ಒಳಚರಂಡಿ, ರಾಜಕಾಲುವೆ, ಕೆರೆ ಕುರಿತ ಸರ್ವೆ ಕೆಲಸ ಆಗಿದೆ. ನಗರದಲ್ಲಿ 167 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿದೆ. 18 ಕೆರೆ ಕಾಮಗಾರಿ ಮುಗಿದಿದೆ, 31ಕ್ಕೆ ಟೆಂಡರ್ ಕರೆದಿದ್ದೇವೆ. 72 ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಉಳಿದ ಕೆರೆಗಳ ಕೆಲಸ ನಡೆಯಲಿದೆ ಎಂದರು.
ಕೆರೆಯಲ್ಲಿ ನೀರು ಸಂಗ್ರಹ ಆಗುವುದರಿಂದ ನೀರು ನುಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಯಲು ಕ್ರಮ ಕೈಗೊಂಡಿದ್ದೇವೆ. ರಾಜಕಾಲುವೆಯಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ನಿರ್ಮಾಣ, ಒತ್ತುವರಿಯಿಂದ ಆಗಿರುವ ಸಮಸ್ಯೆ ತೆರವುಗೊಳಿಸುತ್ತಿದ್ದೇವೆ. 454 ಒತ್ತುವರಿ ತೆರವುಗೊಳಿಸಲಾಗಿದೆ. ನಾಲ್ವರು ಸರ್ವೇಯರ್ಗಳನ್ನು ವಿಶೇಷವಾಗಿ ನೇಮಿಸಿದ್ದು, ಕಾಮಗಾರಿ ನಡೆಯುತ್ತಿದೆ ಎಂದರು.
ರಾಜಕಾಲುವೆಗೆ ಗೋಡೆ ಕಟ್ಟುವ ಕಾರ್ಯದಲ್ಲಿ 840 ಕಿ.ಮೀ. ಗುರುತಿಸಿದ್ದು, ಇವುಗಳಲ್ಲಿ 400 ಕಿ.ಮೀ.ನಷ್ಟು ಗೋಡೆ ಕಟ್ಟುವ ಕೆಲಸ ಮುಗಿದಿದೆ. ಉಳಿದ ರಾಜಕಾಲುವೆಗಳಿಗೆ ಗೋಡೆ ಕಟ್ಟುವ ಕೆಲಸ ಆಗಲಿದೆ. ಈ ಸಾರಿ ಈ ಕಾರಣದಿಂದ ಯಾವುದೇ ನೆರೆ, ನೀರು ನುಗ್ಗುವ ಸಮಸ್ಯೆ ಬಗೆಹರಿಯಲಿದೆ. ಹೊಸ ವಿಸ್ತರಣೆ ಪ್ರದೇಶದಲ್ಲೂ ಗಮನ ಹರಿಸುತ್ತಿದ್ದು, ಯೋಜನೆ ಇಲ್ಲದೇ ಒತ್ತುವರಿ ಮಾಡಿಕೊಂಡ ಕಡೆ ತೆರವುಗೊಳಿಸುತ್ತೇವೆ ಎಂದರು.
ಡೇಂಘಿ ಪ್ರಕರಣ 2018ರಲ್ಲಿ 248 ಆಗಿತ್ತು. ಈ ಸಾರಿ 240 ವರದಿಯಾಗಿದೆ. ಮಹದೇವಪುರ ಸೇರಿದಂತೆ ಎಲ್ಲಿ ಹೆಚ್ಚು ಡೇಂಘಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ಸಾರಿ ನಿಯಂತ್ರಣ ಸಾಧ್ಯವಾಗಲಿದೆ ಎಂದರು.