ಬೆಂಗಳೂರು : ಕಲಬುರಗಿ ನಗರದಲ್ಲಿ ಸುಮಾರು 100ಕ್ಕೂ ಅಧಿಕ ಬಾವಿಗಳಿದ್ದು, ಇವುಗಳಲ್ಲಿ 35 ಬಾವಿ ನಿರ್ವಹಣೆಯಿಲ್ಲದೆ ನಶಿಸಿವೆ. ಸಾರ್ವಜನಿಕರು ತ್ಯಾಜ್ಯ ತಂದು ಇಲ್ಲಿ ಸುರಿಯುತ್ತಿದ್ದು, ನೀರು ಕಲುಷಿತವಾಗಿ ಕೊಳಚೆಯಾಗಿ ಮಾರ್ಪಟ್ಟಿವೆ. ಬಹುತೇಕ ಬಾವಿಗಳಲ್ಲಿ ಹೂಳು ತುಂಬಿದ್ದು, ನೀರು ಸಂಸ್ಕರಿಸದ ಕಾರಣ ಸಂಪೂರ್ಣ ತ್ಯಾಜ್ಯಮಯವಾಗಿದೆ.
ಬಾವಿಯಲ್ಲಿ ಕಸ ಹಾಕುವುದರಿಂದ ನೀರು ಅನುಪಯುಕ್ತವಾಗುತ್ತಿದೆ. ಇನ್ನೊಂದೆಡೆ ಕೊಳಚೆ ನೀರಾಗಿ ಮಾರ್ಪಟ್ಟು ಸೊಳ್ಳೆ ಸೇರಿ ನಾನಾ ಬಗೆಯ ಕ್ರಿಮಿ ಕೀಟಗಳ ಉತ್ಪತ್ತಿ ತಾಣಗಳಾಗುತ್ತಿವೆ. ಇಷ್ಟಾದ್ರೂ ಸಾರ್ವಜನಿಕರು ಬಾವಿಗಳಲ್ಲಿ ಕಸ ಹಾಕುವುದು ನಿಲ್ಲಿಸಿಲ್ಲ.
ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಕೆರೆ ಕಟ್ಟೆಗಳನ್ನು ಕಾಣಬಹುದು. ಕೆರೆಗಳಿಗೆ ನೀರು ಹರಿದು ಬರುವ ರಾಜಕಾಲುವೆಗಳು ಒತ್ತುವರಿದಾರರ ಕೆಂಗಣ್ಣಿಗೆ ಗುರಿಯಾಗಿವೆ. ಚೆನ್ನಾಗಿ ಮಳೆ ಬಂದರೂ ಕೆರೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಹೀಗಾಗಿ, ಇವೆಲ್ಲವೂ ಒಂದು ರೀತಿ ಕಸ ತುಂಬುವ ಬೃಹತ್ ಹೊಂಡಗಳಾಗಿ ಪರಿವರ್ತನೆಗೊಳ್ಳುತ್ತಿವೆ.
ಮಳೆ ನೀರು ಇಲ್ಲದೆ ಪಾಳು ಬಿದ್ದ ಕೆರೆಗಳಿಗೆ ಅನುಪಯುಕ್ತ ಕಟ್ಟಡ ಸಾಮಗ್ರಿಗಳನ್ನು ತಂದು ಹಾಕಲಾಗುತ್ತಿದೆ. ಅಲ್ಲದೆ ಮಾಂಸ ಮಾರಾಟ ಕೇಂದ್ರಗಳಲ್ಲಿ ಉಳಿಯುವ ಕಸ ತಂದು ಕೆರೆಗಳಿಗೆ ಸುರಿಯಲಾಗುತ್ತಿದೆ. ರಾತ್ರೋರಾತ್ರಿ ಕೆಲವರು ಅಪಾರ ಪ್ರಮಾಣದ ಕಸ ತಂದು ಕೆರೆಗಳಿಗೆ ಸುರಿದು ಹೋಗುತ್ತಿದ್ದಾರೆ. ಇದರಿಂದಾಗಿ ಕೆರೆ ಬಹುತೇಕ ಅನುಪಯುಕ್ತ ವಸ್ತುಗಳ ಹೊಂಡಗಳಾಗಿ ಕಾಣುತ್ತಿವೆ.
ರಾಯಚೂರು ನಗರದ ಪ್ರಮುಖ ಜಲಮೂಲ ಮಾವಿನ ಕೆರೆಗೆ ಚರಂಡಿ ನೀರನ್ನು ಬಿಡಲಾಗುತ್ತಿದೆ. ಕೆರೆಯು ದಿನ ದಿನಕ್ಕೆ ಮಲೀನವಾಗುತ್ತಿದೆ. ಕಸದ ರಾಶಿ, ಸತ್ತ ಪ್ರಾಣಿಗಳನ್ನ ಎಸೆಯಲಾಗುತ್ತಿದೆ. ಕಸ ಹಾಕುವ ಡಪಿಂಗ್ ಯಾರ್ಡ್‌ನಂತೆ ಕಸದ ರಾಶಿ ಕಾಣುತ್ತಿದೆ.
ಬಾವಿ ಹಾಗೂ ಕೆರೆಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕದೆ ಸರಿಯಾದ ನಿರ್ವಹಣೆ ಮಾಡಿದ್ರೆ, ಸುಂದರ ಸ್ವಚ್ಛಂದವಾದ ಪರಿಸರ ಸಿಗಲಿದೆ. ಸಾಂಕ್ರಾಮಿಕ ರೋಗಗಳಿಂದ ದೂರ ಇರಬಹುದಾಗಿದೆ. ಅಷ್ಟೇ ಅಲ್ಲ, ನೀರು ಸಂರಕ್ಷಣೆ ಮಾಡಿ ಬೇಸಿಗೆಯಲ್ಲಿ ಹಾಹಾಕಾರ ತಪ್ಪಿಸಲು ದೊಡ್ಡ ಅಸ್ತ್ರವನ್ನಾಗಿ ಬಳಿಸಿಕೊಳ್ಳಬಹುದಾಗಿದೆ.