ಬೆಂಗಳೂರು: ಪ್ರಸ್ತುತ ಸಂದರ್ಭದಲ್ಲಿ ರಾಜ್ಯಪಾಲರು ಬಿ.ಎಸ್ ಯಡಿಯೂರಪ್ಪಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಬಹುದಾ ಎಂಬ ಪ್ರಶ್ನೆ ಎದ್ದಿದ್ದು, ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿರುವ ಕ್ರಮ ಕಾನೂನು ಬಾಹಿರ ಹಾಗೂ ಸಂವಿಧಾನ ಬಾಹಿರ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಮಾತನಾಡಿ, ರಾಜ್ಯಪಾಲರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ಯೋಚನೆ ಮಾಡದೇ ಅವಕಾಶ ನೀಡಿದ್ದು ಹೇಗೆ, ನಿಮಗೆ 112 ಜನರ ಬಹುಮತ ಇದೆಯಾ ಎಂಬ ಬಗ್ಗೆ ರಾಜ್ಯಪಾಲರು ಬಿ ಎಸ್ ಯಡಿಯೂರಪ್ಪ ಅವರನ್ನ ಕೇಳಬೇಕಿತ್ತು ಎಂದ ಉಗ್ರಪ್ಪ, ಈ ಬಗ್ಗೆ ರಾಜ್ಯಪಾಲರು ಯಾಕೆ ಯೋಚನೆ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂರು ಜನ ಅನರ್ಹತೆ ಹೊಂದಿದ್ದು, ಈಗ ಸದನದ ಬಲ 222ಕ್ಕೆ ಕುಸಿದಿದೆ. ಈ ವೇಳೆ ಸರಳ ಬಹುಮತಕ್ಕೆ ಬೇಕಾಗಿರುವುದು 112. ಆದರೆ ಬಿಜೆಪಿ ಬಳಿ ಇರುವುದು ಕೇವಲ 105 ಜನ. ಕಾಂಗ್ರೆಸ್ ಉಗ್ರಪ್ಪ ಹಾಗೂ ಸ್ಪೀಕರ್ ಅವರನ್ನ ಸೇರಿಸಿದರೆ 101 ಸದಸ್ಯರನ್ನು ಹೊಂದಿದೆ. ಜೆಡಿಎಸ್ 34 ಸದಸ್ಯರನ್ನು ಹೊಂದಿದೆ. 12 ಜನರು ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ ಹೀಗಿದ್ದಾಗ ಬಿಜೆಪಿಗೆ ಬಹುಮತ ಇದೆಯಾ ಅನ್ನೋ ಪ್ರಶ್ನೆ ಏಳುತ್ತಿದೆ.
ಹೀಗಾಗಿ ರಾಜ್ಯಪಾಲರ ಕ್ರಮ ಸರಿಯಲ್ಲ ಎಂದು ಉಗ್ರಪ್ಪ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್, ರಾಜ್ಯಪಾಲರ ಕ್ರಮ ಹಾಗೂ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.