ಆನೇಕಲ್: ಕೋವಿಡ್-19 ಅಭಿಯಾನವನ್ನು ಸಂಪೂರ್ಣವಾಗಿ ಬಿಜೆಪಿ ದುರುಪಯೋಗ ಪಡಿಸಿಕೊಂಡು ಹಸಿವಿನಲ್ಲೂ ಲಾಭಕೋರತನ ಮಾಡುತ್ತಿದೆ ಎಂದು ವಿ.ಎಸ್. ಉಗ್ರಪ್ಪ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ-ಕೇಂದ್ರ ಸರ್ಕಾರಗಳು ಆಗಿಂದಾಗ್ಗೆ ಹೊರಡಿಸುವ ಎಲ್ಲ ನಿರ್ದಾರಗಳನ್ನು ಒಪ್ಪಿ ಬೆಂಬಲಿಸಿರುವುದು ನಮ್ಮ ದೌರ್ಬಲ್ಯವಲ್ಲ. ಆದ್ರೆ ಬಜೆಪಿ ಸರ್ಕಾರ ಇದನ್ನು ದುರುಪಯೋಗ ಪಡಿಸಿಕೊಂಡು ಹಸಿವಿನಲ್ಲೂ ಲಾಭಕೋರತನ ಮಾಡುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೇ ಸರ್ಜಾಪುರದ ಅಕ್ರಮ ಅಕ್ಕಿ ದಾಸ್ತಾನು ಪ್ರಕರಣ. ಅದಕ್ಕೆ ಜಿಲ್ಲಾಧಿಕಾರಿ ಶಿವಮೂರ್ತಿ, ಆಹಾರ, ನಾಗರೀಕ ಸಚಿಚ ಗೋಪಾಲಯ್ಯ ಸಮರ್ಥನೆಯು ಸರ್ಕಾರ-ಆಡಳಿತ ಪಕ್ಷದ ಲಾಭಕೋರತನದ ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ನುಡಿದಂತಿದೆ ಎಂದು ಟೀಕಿಸಿದರು.
ಇತ್ತೀಚೆಗೆ ಪ್ರಧಾನ ಮಂತ್ರಿ ಗರೀಬ್ ಯೋಜನೆಯ ಅಕ್ಕಿ ದಾಸ್ತಾನನ್ನು ಆನೇಕಲ್ ತಹಶೀಲ್ದಾರ್- ಆಹಾರ ಇಲಾಖೆಯ ಗಮನಕ್ಕೂ ಬರದಂತೆ ಬಿಜೆಪಿಯ ಮುಖಂಡರೊಬ್ಬರ ಖಾಸಗಿ ರೇಷ್ಮೆ ದಾಸ್ತಾನು ಮಳಿಗೆಯಲ್ಲಿ ರಹಸ್ಯವಾಗಿ ಶೇಖರಿಸಿದ್ದನ್ನು ಆನೇಕಲ್ ಶಾಸಕ ಬಿ ಶಿವಣ್ಣ, ತಹಶೀಲ್ದಾರ್ ಮಹದೇವಯ್ಯ ಅಧಿಕಾರಿಗಳ ತಂಡ ದಾಳಿ ನಡೆಸಿ ಬಹಿರಂಗಪಡಿಸಿತ್ತು. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಧ್ಯಮಗೋಷ್ಟಿ ಕರೆದು ಈ ಅವ್ಯವಹಾರವನ್ನು ಬಯಲಿಗೆಳೆದಿದ್ದರು ಎಂದರು.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಆಹಾರ-ನಾಗರೀಕ ಸೇವಾ ಪೂರೈಕೆ ಸಚಿವ ಗೋಪಾಲಯ್ಯರನ್ನು ಸ್ಥಳಕ್ಕೆ ಕಳುಹಿಸಿ ಪರಶೀಲಿಸುವಂತೆ ಕಳುಹಿಸಲಾಗಿತ್ತು. ಅದರಂತೆ ಸರ್ಜಾಪುರಕ್ಕೆ ಧಾವಿಸಿ ಜಿಲ್ಲಾಧಿಕಾರಿ ಶಿವಮೂರ್ತಿ ಬಂದಾಗ ತಾತ್ಕಾಲಿಕವಾಗಿ ಇದು ಅಕ್ರಮವಲ್ಲ ಎಂದು ಸ್ಪಷ್ಟೀಕರಿಸಿದ್ದರು. ಇದರ ಬೆನ್ನಲ್ಲೇ ಶಾಸಕ ಬಿ ಶಿವಣ್ಣ, ಮಾಜಿ ಸಂಸದ ವಿ ಎಸ್ ಉಗ್ರಪ್ಪ ಮಾಧ್ಯಮಗೋಷ್ಟಿ ನಡೆಸಿ ಅಧಿಕೃತ ದೂರು ಮತ್ತು ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ನಡಾವಳಿಗಳನ್ನು ಪ್ರಸ್ತಾಪಿಸಿ ನ್ಯಾಯಾಂಗ ತನಿಖೆಯಾಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ.
ವಾಟ್ಸ್ಯಾಪ್, ಟ್ವಿಟ್ಟರ್ನಲ್ಲಿ ಯಾವ್ಯಾವುದೋ ಪ್ರಶ್ನೆಗಳಿಗೆ ಸ್ಪಂದಿಸುವ ಪ್ರಧಾನಿ ಮೋದಿ ಹರ್ಯಾಣದಿಂದ ಅಕ್ರಮವಾಗಿ ತಮ್ಮದೇ ಪಕ್ಷದ ವ್ಯಕ್ತಿಗಳ ಈ ದಾಸ್ತಾನಿಗೆ ಯಾಕೆ ಪ್ರತಿಕ್ರಿಯಿಸುತ್ತಿಲ್ಲ. ಜೊತೆಗೆ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಿ ಎಂ ಯಡಿಯೂರಪ್ಪ ನೇರ ಹೊಣೆ ಹೊತ್ತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಲಿ ಎಂದು ಒತ್ತಾಯಿಸಿದ್ದಾರೆ.