ಬೆಂಗಳೂರು: ಕೊಟ್ಟ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ರೂಂ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿ ಮಗಳ ವಿರುದ್ಧ ತಂದೆ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಬನಶಂಕರಿಯ ಮುನಿವೆಂಕಟರಾಮ (68) ನೀಡಿದ ದೂರಿನ ಆಧಾರದ ಮೇಲೆ ನಂದಿನಿ ಲೇಔಟ್ ಠಾಣೆ ಪೊಲೀಸರು ಗಂಗಾವತಿ ಮತ್ತು ವೆಂಕಟೇಶ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮುನಿವೆಂಕಟರಾಮ ಸೆಕ್ಯೂರಿಟಿಗಾರ್ಡ್ ಕೆಲಸ ಮಾಡುತ್ತಿದ್ದು, 2019ರಲ್ಲಿ ನಂದಿನಿ ಲೇಔಟ್‌ನಲ್ಲಿ ನೆಲೆಸಿರುವ ಮಗಳು ಗಂಗಾವತಿ ಮನೆಗೆ ಕರೆದುಕೊಂಡು ಬಂದಿದ್ದಳು. ತುರ್ತು ಹಣ ಬೇಕೆಂದು ಹೇಳಿ 2 ಚಿನ್ನದ ಉಂಗುರ ಹಾಗೂ ಕತ್ತಿನಲ್ಲಿದ್ದ ಸರ ತೆಗೆದುಕೊಂಡು ಹೋಗಿದ್ದರು.
ಮುನಿವೆಂಕಟರಾಮ ಬಿಡಿಎ ಸೈಟ್ ಪಡೆಯಲು ಮುಂದಾಗಿದ್ದು, ಇದಕ್ಕಾಗಿ 4.65 ಲಕ್ಷ ರೂ. ಹೊಂದಿಸಿಟ್ಟಿದ್ದರು. ನಾವೇ ಬಿಡಿಎ ಸೈಟ್ ಪಡೆಯಲು ಹಣ ಕಟ್ಟುತ್ತೇವೆ ಎಂದು ಹೇಳಿ ಮುನಿವೆಂಕಟರಾಮರಿಂದ ಮಗಳು ಹಾಗೂ ಅಳಿಯ ಹಣ ಪಡೆದಿದ್ದರು. ಆದರೆ, ಅವರು ಹಣ ಕಟ್ಟಿರಲಿಲ್ಲ. ಹೀಗಾಗಿ ಮುನಿವೆಂಕಟರಾಮ ಹಣ ಹಿಂತಿರುಗಿಸುವಂತೆ ಹೇಳಿದ್ದರು. ಇದರಿಂದ ಅಕ್ರೋಶಗೊಂಡ ಮಗಳು ಗಂಗಾವತಿ, ಪತಿಯೊಂದಿಗೆ ಸೇರಿ ನನ್ನ ಮೇಲೆ ಹಲ್ಲೆ ನಡೆಸಿ ರೂಂನಲ್ಲಿ 5 ದಿನ ಕೂಡಿ ಹಾಕಿ ಚಿತ್ರ ಹಿಂಸೆ ಕೊಟ್ಟಿದ್ದಾಳೆ ಎಂದು ದೂರಿನಲ್ಲಿ ಮುನಿವೆಂಕಟರಾಮ ಆರೋಪಿಸಿದ್ದಾರೆ.