ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಬೆಂಬಲಿಸಿ ಜೆಡಿಎಸ್ ಸದಸ್ಯರು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ಇಂದು ಪರಿಷತ್ ಕಾರ್ಯದರ್ಶಿ ಕೊಠಡಿಗೆ ತೆರಳಿ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಇರುವ ಲಿಖಿತ ಪತ್ರ ನೀಡಿದರು. ಈ ಸಂದರ್ಭದಲ್ಲಿ ಪರಿಷತ್ನ ಜೆಡಿಎಸ್ ಸದಸ್ಯರಾದ ತಿಪ್ಪೇಸ್ವಾಮಿ, ಅಪ್ಪಾಜಿಗೌಡ, ಮನೋಹರ ಸೇರಿದಂತೆ ಹಲವು ಸದಸ್ಯರು ಹಾಜರಿದ್ದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಬಸವರಾಜ ಹೊರಟ್ಟಿ, ಅವಿಶ್ವಾಸ ನಿರ್ಣಯ ಬೆಂಬಲಿಸಿ ಪರಿಷತ್ ಕಾರ್ಯದರ್ಶಿ ಅವರಿಗೆ ಪತ್ರ ನೀಡಲಾಗಿದೆ. ಸಭಾಪತಿಗಳಿಗೆ ಬಹುಮತ ಇಲ್ಲ. ಅವರು ರಾಜೀನಾಮೆ ಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಸಭಾಪತಿ ಅವರು ರಾಜೀನಾಮೆ ಕೊಡಲಿಲ್ಲ ಅಂದರೆ ಕಾನೂನು ಇದೆ, ನೋಡೊಣ ಎಂದ ಅವರು, ಸಭಾಪತಿ ಸ್ಥಾನದಲ್ಲಿ ಇರಲು ಅವರಿಗೆ ನೈತಿಕತೆ ಇಲ್ಲ. ಮುಂದೆ ಏನು ಮಾಡಬೇಕೆಂದು ಸರ್ಕಾರವೇ ತೀರ್ಮಾನ ಮಾಡಲಿದೆ ಎಂದರು.
ಸಭಾಪತಿಗಳು ಸರ್ಕಾರದ ನಿರ್ದೇಶನದಂತೆ ಸಭೆ ಕರೆದಿದ್ದೇವೆ ಎಂದು ಹೇಳಿದ್ದರು. ಈಗ ಕಾರ್ಯದರ್ಶಿ ಹೇಳಿದಂತೆ ಸಭೆ ಕರೆದಿದ್ದಾರೆ. ಇದು ನ್ಯಾಯ ಸಮ್ಮತವಲ್ಲ. ಅದಕ್ಕೆ ಉಪಸಭಾಪತಿಗಳನ್ನು ಚೇರ್ ನಲ್ಲಿ ಕೂರಿಸಿದ್ದೆವು. ಈಗ 14 ಜೆಡಿಎಸ್ ಸದಸ್ಯರು ಸಹಿ ಹಾಕಿದ್ದೇವೆ. ಅನಿರ್ದಿಷ್ಟಾವಧಿಗೆ ಮುಂದೂಡಿರಬಹುದು. ಈಗ ಅವರು ನೈತಿಕವಾಗಿ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.