ಹಿರಿಯ ನಟಿ ಜಯಂತಿ ಅಗಲಿಕೆಯಿಂದ ಇಡೀ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ. ಪ್ರತಿಭಾನ್ವಿತ ನಟಿಯ ಜೀವನ ಪಯಣದ ಹಾದಿ ಹೇಗಿತ್ತು ಗೊತ್ತಾ?
ಜಯಂತಿ ಮೂಲ ಹೆಸರು ಕಮಲಾ ಕುಮಾರಿ
1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿಯವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ, ತಾಯಿ ಸಂತಾನ ಲಕ್ಷ್ಮಿ. ಬಾಲ ಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮಿ ಗೃಹಿಣಿಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದು, ಅವರಲ್ಲಿ ಹಿರಿಯವರೇ ಜಯಂತಿ. ತಂದೆ-ತಾಯಿ ವಿಚ್ಛೇದನ ಪಡೆದ ಹಿನ್ನೆಲೆ ಜಯಂತಿ ಅಮ್ಮನೊಂದಿಗೆ ಮದ್ರಾಸ್ನಲ್ಲಿ ಬೆಳೆದರು.
ಜೇನುಗೂಡು ಮೂಲಕ ಸಿನಿರಂಗಕ್ಕೆ ಎಂಟ್ರಿ
1968ರಲ್ಲಿ ವೈ.ಆರ್. ಪುಟ್ಟಸ್ವಾಮಿ ನಿರ್ದೇಶನದ 'ಜೇನುಗೂಡು' ಚಿತ್ರದ ಮೂಲಕ ಕನ್ನಡ ಸಿನಿ ಕ್ಷೇತ್ರ ಪ್ರವೇಶಿಸಿದ್ದ ನಟಿ ಜಯಂತಿ ಕನ್ನಡದಲ್ಲಿ 190ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಅಣ್ಣಾವ್ರ ಜತೆ ಅಭಿನಯ ಶಾರದೆ
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಗಳಲ್ಲಿ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜನರ ಮನ ಗೆದ್ದಿದ್ದರು. ಕರುನಾಡ ನಟ ಸಾರ್ವಭೌಮ ಡಾ.ರಾಜ್ಕುಮಾರ್ ಜತೆಗೆ 45 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
ರಾಜ್ಯ, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಜಯಂತಿ
ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್ ಚಿತ್ರಗಳಿಗೆ ಜಯಂತಿಯವರಿಗೆ ರಾಜ್ಯ ಪ್ರಶಸ್ತಿ ಒಲಿದು ಬಂದಿತ್ತು. 'ಮಿಸ್ ಲೀಲಾವತಿ' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.
ಶೋಕಸಾಗರದಲ್ಲಿ ಮುಳುಗಿದ ಚಂದನ ವನ
ಜಯಂತಿ ನಿಧನದಿಂದ ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದೆ. ಅಭಿನಯ ಶಾರದೆ ಕಳೆದುಕೊಂಡ ಚಂದನವನ ಶೋಕಸಾಗರದಲ್ಲಿ ಮುಳುಗಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಇನ್ನಿಲ್ಲ..