ಬೆಂಗಳೂರು: ನಗರದಲ್ಲಿ ಟೋಯಿಂಗ್ ಕಿರಿಕಿರಿ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.ವಿಕಾಸೌಧದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಸಂಚಾರಿ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯ ಬಳಿಕ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಹೊಸ ಸರಳೀಕೃತ ವ್ಯವಸ್ಥೆ ಬರುವವರೆಗೆ ನಗರದಲ್ಲಿ ಟೋಯಿಂಗ್ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಟೋಯಿಂಗ್ನಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಸುಗಮ ವಾಹನಗಳ ಸಂಚಾರಕ್ಕೆ ನೆರವಾಗುವ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಕಿರುಕುಳ ಸಮಸ್ಯೆ ನಿವಾರಿಸಲು ಸರ್ಕಾರ ಶೀಘ್ರದಲ್ಲಿ ಒಂದು ನಿರ್ಧಾರಕ್ಕೆ ಬರುತ್ತದೆ. ಈ ಸಂಬಂಧ ಪೂರ್ವಭಾವಿ ಚರ್ಚೆಯನ್ನು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿದ್ದೇನೆ. ಚರ್ಚೆಯಾದ ವಿಷಯದ ಬಗ್ಗೆ ಮುಖ್ಯಮಂತ್ರಿ ಜೊತೆ ಸಮಾಲೋಚಿಸಿ, ಟೋಯಿಂಗ್ ಸಮಸ್ಯೆಗೆ ಶೀಘ್ರವೇ ಪರಿಹಾರ ಘೋಷಿಸಲಾಗುವುದು ಎಂದು ವಿವರಿಸಿದರು.
ಟೋಯಿಂಗ್ ಬಗ್ಗೆ ಸಾರ್ವಜನಿಕರ ಹೇಳಿಕೆಗಳನ್ನ ಗೌರವಿಸಲಾಗುತ್ತಿದೆ. ಅದೇ ಕಾರಣಕ್ಕೆ ಸದ್ಯಕ್ಕೆ ಟೋಯಿಂಗ್ ನಿಲ್ಲಿಸಿದ್ದೇವೆ. ಸಿಎಂ ಕೂಡ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಒಂದು ನಿರ್ಣಯಕ್ಕೆ ಬನ್ನಿ ಅಂತಾ ಸಿಎಂ ಹೇಳಿದ್ದರು. ಈಗ ಇಲಾಖಾಧಿಕಾರಿಗಳ ಸಭೆ ನಡೆಸಿದ್ದೇನೆ. ಈಗ ಸಿಎಂ ಜೊತೆ ಚರ್ಚಿಸಲು ತೆರಳುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಹೊಸ ವ್ಯವಸ್ಥೆ ತರುತ್ತೇವೆ. ಸಿಎಂ ಜೊತೆ ಚರ್ಚಿಸಿ ಏನು ಅನ್ನೋದನ್ನ ಘೋಷಿಸಲಾಗುವುದು. ಮುಂದೆ ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಆಗಬಾರದು ಎಂಬುದು ನಮ್ಮ ಆಶಯ ಎಂದು ಹೇಳಿದರು.
ಪಾರ್ಕಿಂಗ್ ನಾಮಫಲಕಗಳು ಸಾರ್ವಜನಿಕರಿಗೆ ಸರಿಯಾಗಿ ಕಾಣಬೇಕು. ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಇದುವರೆಗೂ ಏನಾಗಿದೆಯೋ ಇನ್ನು ಮುಂದೆ ಆಗಬಾರದು. ವ್ಯವಸ್ಥೆಯನ್ನ ಸರಳೀಕರಣಗೊಳಿಸಿ ಪಾರದರ್ಶಕತೆ ತರುತ್ತೇವೆ. ಸಂಚಾರ ಪೊಲೀಸರ ನ್ಯೂನ್ಯತೆ ಬಗ್ಗೆಯೂ ಗಮನ ಹರಿಸುತ್ತೇವೆ ಎಂದು ವಿವರಿಸಿದರು. ಇದಾದ ಬಳಿಕ ಸಭೆಯ ವಿವರ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ ತೆರಳಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ