ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದಕ್ಕೂ ಮುನ್ನ ಎಚ್ಚರ ವಹಿಸಿ ವಾಹನ ಮಾಲೀಕರೇ.. ನೀವು ಪಾರ್ಕಿಂಗ್ ಮಾಡಿ ವಾಪಸ್ ಬರುವುದ್ರೊಳಗೆ ನಿಮ್ಮ ವಾಹನವೇ ಮಾಯವಾಗಿರುತ್ತೆ..!
ಹೌದು, ಮಹಾನಗರ ಬೆಂಗಳೂರಲ್ಲಿ ವಾಹನ ಪಾರ್ಕಿಂಗ್ ಮಾಡುವಾಗ ಟ್ರಾಫಿಕ್ ಪೊಲೀಸರ ಕಿರಿಕಿರಿ ಹೆಚ್ಚಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ವಾರ್ನಿಂಗ್ ಕೊಟ್ಟು ವಾಹನಗಳನ್ನು ಎತ್ತಿಕೊಂಡು ಹೋಗುವ ಬದಲಿಗೆ ಯಾವುದೇ ಸೂಚನೆ ನೀಡದೆ ವಾಹನಗಳನ್ನು ಟೋಯಿಂಗ್ ಮಾಡುತ್ತಿದ್ದಾರಂತೆ ಬೆಂಗಳೂರು ಪೊಲೀಸರು.
ಇದರ ಜೊತೆಗೆ ಪೊಲೀಸರೇ ಗೂಂಡಾಗಳನ್ನ ಟೋಯಿಂಗ್ ಕೆಲಸಕ್ಕೆ ಬಳಸುತ್ತಿದ್ದಾರೆ. ಬೆಂಗಳೂರು ಹೊರವಲಯ ಜಾಲಹಳ್ಳಿ ಕ್ರಾಸ್ನಲ್ಲಿ ಟೋಯಿಂಗ್ ಮಾಡಲು ಬಂದಾಗ ಪೊಲೀಸ್ ಮತ್ತು ಬೈಕ್ ಸವಾರನ ನಡುವೆ ಜಗಳ ನಡೆದಿದೆ. ಸೈರನ್ ಹಾಕದೆ ಪೊಲೀಸರು ಏಕಾಏಕಿ ರಸ್ತೆ ಬದಿಯಲ್ಲಿದ್ದ ವಾಹನಗಳನ್ನ ಟೈಗರ್ ವಾಹನಕ್ಕೆ ತುಂಬಿಕೊಳ್ಳುತ್ತಿದ್ದರು. ಇದನ್ನ ಪ್ರಶ್ನೆ ಮಾಡಿದ ಯುವಕನಿಗೆ ಎಎಸ್ಐ ದೇವರಾಜು ಹಾಗೂ ಟೈಗರ್ ವಾಹನದ ಯುವಕರು ಬೈಕ್ ಸವಾರರಿಗೆ ಆವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಲ್ಲದೆ ಈ ವೇಳೆ ವಿಡಿಯೋ ಮಾಡುತ್ತಿದ್ದ ಯುವಕನಿಗೆ ವಿಡಿಯೋ ಇನ್ನೂ ಚೆನ್ನಾಗಿ ತಗೋ ಅಂತ ವಿಕ್ಟರಿ ಸಿಂಬಲ್ ತೋರಿದ್ದಾರೆ ಎನ್ನಲಾಗಿದೆ. ಯಾವಾಗ ವಾಹನ ಸವಾರ ಹೆದರದೆ ಪ್ರಶ್ನೆ ಶುರು ಮಾಡಿದನೋ, ಆಗ ಎಲ್ಲರೂ ಸ್ಥಳದಿಂದ ಎಸ್ಕೇಪ್ ಆಗಿದ್ದಾರಂತೆ.