ಬೆಂಗಳೂರು : ಅಮಿತ್ ಶಾ ಧೋರಣೆ ಎಲ್ಲ ಪ್ರಾದೇಶಿಕ ಭಾಷೆ ತುಳಿಯುವ ಹುನ್ನಾರವಾಗಿದ್ದು,ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ತಿಂಗಳ 15 ರಿಂದ ಹಿಂದಿ ವಿರೋಧಿಸುವ ಚಳವಳಿ ನಡೆಯಲಿದೆ. ಬೆಳಗಾವಿ, ಕೋಲಾರ, ಎಲ್ಲ ಕಡೆ ಚಳವಳಿ ನಡೆಯಲಿದೆ. ಬೆಂಗಳೂರಿನಲ್ಲಿ ಕರಾಳ ದಿನ ಆಚರಣೆ ನಡೆಸಲಿದ್ದೇವೆ. ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಎಲ್ಲರ ಮೇಲೆ ಹೇರುವ ಕೆಲಸ ಮಾಡುತ್ತಿದೆ. ಕೇಂದ್ರ ಗೃಹಮಂತ್ರಿ ಅಮಿತ್ ಶಾ ನೇತೃತ್ವದ ಸಮಿತಿ ರಾಷ್ಟ್ರಪತಿ ಅವರಿಗೆ ವರದಿ ಸಲ್ಲಿಸಿದೆ. ಈ ಸಮಿತಿಯ ವರದಿಯಲ್ಲಿ ಹಿಂದಿ ಬಗ್ಗೆ ವಿಚಾರ ಹೇಳಿದ್ದಾರೆ. ಅಮಿತ್ ಶಾ ಅವರು ಒಕ್ಕೂಟದ ವ್ಯವಸ್ಥೆ ಬಗ್ಗೆ ನಂಬಿಕೆ ಇಡಬೇಕು ಎಂದು ಕಿಡಿ ಕಾರಿದರು.
ಹಿಂದಿ ಒಂದೇ ರಾಷ್ಟ್ರ ಭಾಷೆಯಲ್ಲ: ಹಿಂದಿ ಭಾಷೆ ಒಂದೇ ರಾಷ್ಟ್ರ ಭಾಷೆ ಅಲ್ಲ. ಕನ್ನಡವೂ ಕೂಡ ರಾಷ್ಟ್ರ ಭಾಷೆ. ಪ್ರಾದೇಶಿಕ ಭಾಷೆ ಎಲ್ಲವೂ ರಾಷ್ಟ್ರ ಭಾಷೆ. ಅವರು ಹೇಳಿರೋ ವರದಿ ಅನುಷ್ಠಾನಕ್ಕೆ ಬಂದರೆ ಈ ದೇಶದ ವ್ಯವಸ್ಥೆ ಒಂದು ರೀತಿ ಗಂಭೀರ ಪರಿಸ್ಥಿತಿಗೆ ಬರಲಿದೆ. ತಾಂತ್ರಿಕ ಶಿಕ್ಷಣ ಹಿಂದಿಯಲ್ಲೇ ಇರಬೇಕು. ಅವರ ಮಾತು,ಸಮಿತಿಯ ವರದಿ ನಿಜಕ್ಕೂ ದಬ್ಬಾಳಿಕೆ. ನೀವು ಅದನ್ನು ಪಾಲಿಸಬೇಕು ಅನ್ನೋದು ಖಂಡಿತ ಗೌರವ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದು RSS ಅಜೆಂಡಾ. ಹಿಂದಿ ಒಂದೇ, ಬೇರೆ ಭಾಷೆ ಇಲ್ಲ ಅನ್ನೋದು ಅವರ ಅಭಿಪ್ರಾಯ. ನಾವು ಇದನ್ನು ವಿರೋಧಿಸುತ್ತೇವೆ. ಪ್ರಾದೇಶಿಕ ಭಾಷೆ ಮೇಲೆ ಪಾಳೆಗಾರಿಕೆ ಮಾಡೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಬಿ ಎಲ್ ಸಂತೋಷ್ ವಿರುದ್ಧ ಕಿಡಿ : ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು ಮಹಾತ್ಮಾ ಗಾಂಧಿ ಒಬ್ಬರೇ ಅಲ್ಲ ಎಂಬ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಹೇಳಿಕೆಗೆ ಕಿಡಿಕಾರಿರುವ ಅವರು, ಮಹಾತ್ಮ ಗಾಂಧೀಜಿ ಒಬ್ಬರೇ ಸ್ವಾತಂತ್ರ್ಯ ತಂದಿದ್ದು. ಗಾಂಧೀಜಿ ಹಿಂದೆ ಅನೇಕರು ಇರಬಹುದು, ಆದರೆ ಅದಕ್ಕೆ ಅವರನ್ನು ಮಹಾತ್ಮ ಎಂದು ಕರೆದಿದ್ದು ಎಂದರು.
ಗೋಡ್ಸೆ ಫೋಟೋ ಹಿಡಿದು ರ್ಯಾಲಿ ಮಾಡಿದರು. ಆದ್ರೆ ಸರ್ಕಾರ ಯಾರ ವಿರುದ್ಧವೂ ಕ್ರಮಕೈಗೊಳ್ಳಲಿಲ್ಲ.ತನಿಖೆಯೂ ನಡೆಯಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಗಾಂಧೀಜಿ ಅವರೇ ಎಂದು ಬಿ.ಎಲ್ ಸಂತೋಷ್‌ಗೆ ಟಾಂಗ್ ನೀಡಿದರು.
ಮೊಸಳೆಗೆ ಸ್ಮಾರಕ ನಿರ್ಮಿಸಿ : ಕಾಸರಗೋಡಿನ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಾವನ್ನಪ್ಪಿರುವ ದೇವರ ಮೊಸಳೆಗೆ ಸ್ಮಾರಕ ನಿರ್ಮಿಸುವಂತೆ ವಾಟಾಳ್ ಕೇರಳ ಸರ್ಕಾರಕ್ಕೆ ಒತ್ತಾಯಿಸಿದರು. ಪ್ರಪಂಚದಲ್ಲೇ ಮೊದಲ ಘಟನೆ ಇದು. 70 ವರ್ಷ ಬದುಕಿದ್ದ ಮೊಸಳೆ ಪ್ರಸಾದ ಮಾತ್ರ ತಿನ್ನುತ್ತಿತ್ತು. ಸಸ್ಯಹಾರಿ ಮೊಸಳೆ ಇದೊಂದೇ ಅನಿಸುತ್ತದೆ. ದೇವಸ್ಥಾನ ಕಾಯುತ್ತಿದ್ದ ಮೊಸಳೆ ಅದು. ನಾನು ಅದರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕಾಸರಗೋಡು ಸದ್ಯ ಕೇರಳ ಸರ್ಕಾರದಲ್ಲಿದೆ. ನಾನು ಕೇರಳ ಸರ್ಕಾರಕ್ಕೆ ಒತ್ತಾಯ ಮಾಡ್ತೀನಿ. ಮೊಸಳೆಗೆ ಭವ್ಯ ಮಂಟಪ ಕಟ್ಟಬೇಕು ಎಂದು ಆಗ್ರಹಿಸಿದರು.
ಚಾಮರಾಜನಗರ ಕಣದಲ್ಲಿ ಸ್ಪರ್ಧಿಸುತ್ತೇನೆ : ಮುಂದಿನ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಮೂರು ನಾಲ್ಕು ತಿಂಗಳಿಂದ ಅಲ್ಲಿ ಓಡಾಡುತ್ತಿದ್ದೇನೆ. ಅಲ್ಲಿನ ಜನರಿಗೆ ನೇರವಾಗಿ ಹೇಳುತ್ತಿದ್ದೇನೆ. ಜಾತಿ, ಹಣ ಉಪಯೋಗಿಸಿದರೆ ನಾವು ಯಾರೂ ನಿಲ್ಲಲು ಅಸಾಧ್ಯ ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆ ಮಾಡಿದವನು ನಾನು. ಕಾವೇರಿ ನೀರು ಕೊಟ್ಟವನು ನಾನು. ಪ್ರತಿ ಮನೆಗಳಿಗೆ ಕಾವೇರಿ ನೀರು, ಡಬಲ್ ರೋಡ್, ನಿವೇಶನ ಕೊಟ್ಟಿದ್ದೇನೆ. ನಾನು ಮಾಡಿದ ಕೆಲಸ ಚಾಮರಾಜನಗರಕ್ಕೆ ಯಾರೂ ಮಾಡಿಲ್ಲ. ಆದರೆ ಚುನಾವಣೆ ಬಂದಾಗ ಜಾತಿ ಹಣ ಬರುತ್ತೆ. ಈ ಬಾರಿ ಜಾತಿ ಹಣಕ್ಕೆ ಮರುಳಾಗದೇ ನನಗೆ ಬೆಂಬಲಿಸುವಂತೆ ಕ್ಷೇತ್ರದ ಜನರನ್ನು ಕೋರಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ : ಇಷ್ಟೊಂದು ಸುಳ್ಳು ಹೇಳೋ ಪ್ರಧಾನಿಯನ್ನ ಹಿಂದೆಂದೂ ನೋಡಿಲ್ಲ.. ಸಿದ್ದರಾಮಯ್ಯ