ಬೆಂಗಳೂರು: ವಶಿಷ್ಠ ಸೌಹಾರ್ದ ಸಹಕಾರ ಸಂಘದ ಅವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಾಧ್ಯವಿಲ್ಲ. ಸಿಐಡಿ ತನಿಖೆ ಮುಂದುವರೆಯಲಿದ್ದು, ಸಕ್ಷಮ ಪ್ರಾಧಿಕಾರ ರಚಿಸಿ ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದು, ಪ್ರತಿಪಕ್ಷದ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಸಹಕಾರ ಸಂಘದ ಅಧ್ಯಕ್ಷ, ಪದಾಧಿಕಾರಗಳ ಪದಚ್ಯುತಿ ಮಾಡಲಾಗಿದೆ. ಸಿಐಡಿ ಮೂಲಕ ಸಹಕಾರ ಸಂಘದ ಇಡೀ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 27 ಕೋಟಿ ರಿಕವರಿ ಮಾಡಲಾಗಿದೆ. 729 ಠೇವಣಿದಾರರಿಗೆ ಮರುಪಾವತಿ ಮಾಡಿದ್ದೇವೆ. ಇನ್ನು ಹೆಚ್ಚಿನ ತನಿಖೆಗೆ ಸಕ್ಷಮ ಪ್ರಾಧಿಕಾರ ರಚಿಸಲು ನಿರ್ಧರಿಸಿದ್ದೇವೆ. ಆಡಿಟ್ ಮರುಪರಿಶೀಲನೆಗೆ ನಿರ್ಧರಿಸಿದ್ದೇವೆ ಎಂದರು.
ಈಗ ಆಡಿಟ್ ಅಂತಿಮ ಹಂತಕ್ಕೆ ಬರಲಿದೆ. 280 ಕೋಟಿ ವಂಚನೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಸಾಲ ಪಡೆದವರ ಸ್ವತ್ತು ವಶಕ್ಕೆ ಪಡೆಯುವ ಕ್ರಮಕ್ಕೆ ನಿರ್ಧರಿಸಲಾಗಿದೆ. ಆ ಕೆಲಸ ಪ್ರಗತಿಯಲ್ಲಿದೆ. ವಸೂಲಿಗೆ ಬೇಕಾದ ಕ್ರಮದ ಬಗ್ಗೆ ಉಪ ವಿಭಾಗಾಧಿಕಾರ ನೇತೃತ್ವದ ಸಕ್ಷಮ ಪ್ರಾಧಿಕಾರ ರಚನೆಗೆ ಆದೇಶವಾಗಲಿದೆ. ನಂತರ ಉಳಿದವರ ಠೇವಣಿ ಹಣ ವಾಪಸ್ ಕೊಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಿಬಿಐ ತನಿಖೆಯಿಂದ ತಾರ್ತಿಕ ಅಂತ್ಯ ಬರಲ್ಲ ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದರು. ಸೋಮಶೇಖರ್, ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಸಿಐಡಿ ತನಿಖೆ ನಡೆಯುತ್ತಿದೆ. ಸರಿಯಾಗಿ ತನಿಖೆ ನಡೆಯದೇ ಇದ್ದಲ್ಲಿ ಮಾತ್ರ ಬೇರೆ ತನಿಖೆ ಬಗ್ಗೆ ಆಲೋಚನೆ ಮಾಡಬಹುದು ಆದರೆ ಸಿಐಡಿ ಆಸಕ್ತಿ ವಹಿಸಿ ತನಿಖೆ ನಡೆಸುತ್ತಿದೆ. ಸಕ್ಷಮ ಪ್ರಾಧಿಕಾರವನ್ನೂ ರಚಿಸಲಾಗುತ್ತದೆ. ಹಾಗಾಗಿ ಠೇವಣಿದಾರರಿಗೆ ಹಣ ವಾಪಸ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ವೇಳೆ ಜೆಡಿಎಸ್ನ ಸರವಣ ಮಧ್ಯಪ್ರವೇಶಿಸಿ ಸಿಬಿಐ ತನಿಖೆಗೆ ಆಗ್ರಹಿಸಿದರು. 3500 ಕೋಟಿ ಲೂಟಿಯಾಗಿದೆ, ಕೆಲವರು ಠೇವಣಿ ಹಣ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು. ಇದಕ್ಕೆ ಸಹಕಾರ ಸಚಿವ ಸೋಮಶೇಖರ್ ಆಕ್ಷೇಪ ವ್ಯಕ್ತಪಡಿಸಿದರು. ತಪ್ಪು ಮಾಹಿತಿ ನೀಡಬೇಡಿ ಎಂದರು ಈ ವೇಳೆ ಸರವಣ, ಸೋಮಶೇಖರ್ ನಡುವೆ ಜಟಾಪಟಿ ನಡೆಯಿತು.
ನಂತರ ಮಾತು ಮುಂದುವರೆಸಿದ ಸಚಿವ ಸೋಮಶೇಖರ್, ಏನೆಲ್ಲಾ ಮಾಡಬೇಕೋ ಎಲ್ಲ ಮಾಡಲಾಗುತ್ತದೆ. ಸಾಲ ವಸೂಲಿಗೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದೇವೆ. ಮತ್ತೊಂದು ಸಭೆ ಮಾಡುತ್ತೇವೆ. ಸಿಐಡಿ ತನಿಖೆ ಸರಿಯಾಗಿ ಆಗದೆ ಇದ್ದಾಗ ಆಗ ಸಿಬಿಐಗೆ ಕೊಡುವ ಚಿಂತನೆ ನಡೆಸಲಾಗುತ್ತದೆ ಎಂದರು.
ಇದನ್ನೂ ಓದಿ: ಸೊರಬ ದೇವಸ್ಥಾನ ರಸ್ತೆಯಲ್ಲಿರುವ ಮದ್ಯದ ಅಂಗಡಿ ಅಮಾನತು: ಸಚಿವ ಕೆ. ಗೋಪಾಲಯ್ಯ