ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಇಂದು ವಿವಿಧ ಮುಖಂಡರು ಭೇಟಿ ನೀಡಿ ಚರ್ಚಿಸಿದರು. ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನ ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿದೆ. ಮುಸ್ಲಿಂ ನಾಯಕರನ್ನೇ ಕೇಂದ್ರ ಸರ್ಕಾರ ಗುರಿಯಾಗಿಸಿಕೊಳ್ಳುತ್ತಿದೆ ಎಂದು ಜಮೀರ್ ಟ್ವೀಟ್ ಮೂಲಕ ಆರೋಪ ಕೂಡ ಮಾಡಿದ್ದಾರೆ.
ಈ ಹಿನ್ನೆಲೆ ಇಂದು ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಶಾಸಕ ರಿಜ್ವಾನ್ ಅರ್ಷದ್, ಎಂಎಲ್ಸಿಗಳಾದ ಸುನೀಲ್ ಗೌಡ ಪಾಟೀಲ್ ಹಾಗೂ ನಜೀರ್ ಅಹ್ಮದ್ ಅವರು ಭೇಟಿ ಮಾಡಿ ಸುದೀರ್ಘ ಸಮಾಲೋಚನೆ ನಡೆಸಿದರು.
ಕಾಂಗ್ರೆಸ್ನ ಅಲ್ಪಸಂಖ್ಯಾತ ಮುಸಲ್ಮಾನ್ ನಾಯಕರನ್ನ ಕೇಂದ್ರ ಸರ್ಕಾರ ಗುರಿಯಾಗಿಸಿ ದಾಳಿ ನಡೆಸುತ್ತಿರುವುದನ್ನು ಪಕ್ಷದ ವತಿಯಿಂದ ಖಂಡಿಸಬೇಕಿದೆ. ಇದಕ್ಕಾಗಿ ಸೂಕ್ತ ಹೋರಾಟದ ವೇದಿಕೆ ರೂಪಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ.
ಚಿತ್ರರಂಗದ ಪ್ರಮುಖರ ಭೇಟಿ:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ, ಚಿತ್ರ ನಿರ್ಮಾಪಕ, ನಟ ಸಾ.ರಾ.ಗೋವಿಂದ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
ಇತ್ತೀಚೆಗಷ್ಟೇ ರಾಜಾಜಿನಗರದಲ್ಲಿ ಆಹಾರದ ಕಿಟ್ ವಿತರಣೆ ಸಮಾರಂಭ ಆಯೋಜಿಸಿ ಕಾಂಗ್ರೆಸ್ ನಾಯಕರನ್ನ ಬರಮಾಡಿಕೊಂಡು ಅದೇ ಸಮಾರಂಭದಲ್ಲಿಯೇ ಕಾಂಗ್ರೆಸ್ ಸೇರ್ಪಡೆ ಆಗುವುದಾಗಿ ಸಾ.ರಾ.ಗೋವಿಂದ ಘೋಷಣೆ ಮಾಡಿದ್ದರು. ಇದಾದ ಬಳಿಕ ಕಾಂಗ್ರೆಸ್ನ ವಿವಿಧ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಇದರ ಮುಂದುವರಿದ ಭಾಗವಾಗಿಯೇ ಇಂದು ಡಿ.ಕೆ.ಶಿವಕುಮಾರ್ ಅವರನ್ನ ಭೇಟಿಯಾಗಿ ಚರ್ಚಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಕೈಗೊಳ್ಳುವ ಹೋರಾಟದ ಕುರಿತು ರೂಪುರೇಷೆ ಹೆಣೆಯುವ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಸ್ಯಾಂಡಲ್ವುಡ್ ನಟ ನೆನಪಿರಲಿ ಪ್ರೇಮ್ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಸಿ.ಟಿ.ರವಿ ವಿರುದ್ಧ ಡಿಕೆಶಿ ವಾಗ್ದಾಳಿ:
ನೆಹರು ಮತ್ತು ವಾಜಪೇಯಿ ಮಾದರಿ ನಾಯಕರು ಎಂಬ ಗಡ್ಕರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜಕಾರಣ ಏನೇ ಇರಬಹುದು. ಆದರೆ, ಇಬ್ಬರು ಪಿಎಂಗಳ ಸೇವೆ ನಾವು ಮರೆಯಲು ಸಾಧ್ಯವಿಲ್ಲ. ನಾನು ಹಲವು ಬಾರಿ ವಾಜಪೇಯಿ ಕೆಲಸಗಳನ್ನ ಪ್ರಶಂಸೆ ಮಾಡಿದ್ದೇನೆ. ಬೆಂಗಳೂರು ಮತ್ತು ದೇಶಕ್ಕೆ ಅವರ ಕೊಡುಗೆ ಅಪಾರ. ರಾಜಕಾರಣದಲ್ಲಿ ಈಗ ಕಣ್ಣು ಬಿಡ್ತಿರುವವರು ಮಾತನಾಡ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.
ಅಫ್ಘಾನಿಸ್ತಾನದಲ್ಲಿ ಇರುವ ಕನ್ನಡಿಗರ ರಕ್ಷಣೆ ವಿಚಾರ ಮಾತನಾಡಿ, ಅಕ್ಕಪಕ್ಕದ ದೇಶಗಳ ಜತೆ ಕೇಂದ್ರ ಸರ್ಕಾರ ಯಾವ ರೀತಿ ಸಂಬಂಧ ಬೆಳೆಸಿಕೊಂಡಿದೆ ಅನ್ನೋದು ಗೊತ್ತಾಗುತ್ತಿದೆ. ರಾಜೀವ್ ಗಾಂಧಿ ಅವರು ಶಾರ್ಕ್ ಸಮ್ಮೇಳನ ನಡೆಸಿ ಎಲ್ಲ ದೇಶಗಳ ಜತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಕನ್ನಡಿಗರ ರಕ್ಷಣೆ ಕೇಂದ್ರ ಸರ್ಕಾರದ ಪ್ರಮುಖ ಜವಾಬ್ದಾರಿ ಎಂದರು.
ಜೀವಂತ ಇರುವ ಸೈನಿಕನ ಮನೆಗೆ ಹೋಗಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಸಾಂತ್ವನ ಹೇಳಿರುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಸತ್ತಿದೆ ಅನ್ನೋದಕ್ಕೆ ಬೇರೆ ಉದಾಹರಣೆ ಬೇಕಿಲ್ಲ. ಕೇಂದ್ರ ಸಚಿವ ರಾಜ್ಯದ ಗೆಸ್ಟ್. ಅವರಿಗೆ ಮಾಹಿತಿ ಕೊಡುವುದು ಜಿಲ್ಲಾಡಳಿತದ ಜವಾಬ್ದಾರಿ. ಬಿಜೆಪಿ ಕಾರ್ಯಕರ್ತರು ಏನು ಮಾಡ್ತಿದ್ರು. ಇಂತಹ ಎಡವಟ್ಟು ಮಾಡಿದ್ದು ಯಾರಿಂದ? ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತೆ ಆಗಿದೆ. ಮುಸ್ಲಿಂ ನಾಯಕರನ್ನ ಇಡಿ ಟಾರ್ಗೆಟ್ ಮಾಡ್ತಿದೆ ಅನ್ನೋ ಜಮೀರ್ ಟ್ವೀಟ್ ವಿಚಾರವಾಗಿ ಮುಂದೆ ಮಾತನಾಡ್ತೀನಿ ಎಂದರು.