ಬೆಂಗಳೂರು : ನಕ್ಸಲ್ ದಾಳಿ ಪ್ರಕರಣದಲ್ಲಿ ತಮ್ಮ ವಿರುದ್ಧ ತುಮಕೂರಿನ ಮಧುಗಿರಿ ನ್ಯಾಯಾಲಯ ಹೊರಡಿಸಿರುವ ಜಾಮೀನು ರಹಿತ ಬಂಧನ ವಾರಂಟ್ ರದ್ದು ಕೋರಿ ತೆಲುಗು ಕವಿ ವರವರ ರಾವ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಹೇಳಿಲ್ಲ.
ನ್ಯಾಯಾಲಯದ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಸಿದ್ಧನಿದ್ದೇನೆ. ವೈದ್ಯಕೀಯ ಕಾರಣಗಳ ಮೇಲೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಪಡೆದಿದ್ದೇನೆ. ಜಾಮೀನು ನೀಡುವ ವೇಳೆ ಎನ್ಐಎ ನ್ಯಾಯಾಲಯ ವ್ಯಾಪ್ತಿಯಿಂದ ಹೊರ ಹೋಗದಂತೆ ನಿರ್ಬಂಧಿಸಿದೆ. ಹೀಗಾಗಿ, ಮಧುಗಿರಿ ಕೋರ್ಟ್‌ನ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ಮಧುಗಿರಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 21ರಂದು ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ನ್ಯಾಯಾಲಯದ ಎದುರು ಹಾಜರಾಗಲು ಸಾಧ್ಯವಿಲ್ಲ.
ಆದ್ದರಿಂದ, ತಮ್ಮ ವಿರುದ್ಧ ಹೊರಡಿಸಿರುವ ಬಂಧನ ವಾರಂಟ್ ರದ್ದುಪಡಿಸಬೇಕು ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅವಕಾಶ ನೀಡಬೇಕು ಎಂದು ವರವರ ರಾವ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
2005ರ ಫೆಬ್ರವರಿ 5ರಂದು ಚಿಕ್ಕಮಗಳೂರು ಜಿಲ್ಲೆಯ ಮೆಣಸಿನಹಾಡ್ಯದಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಅದೇ ವರ್ಷ ಫೆಬ್ರವರಿ 10ರಂದು ನಕ್ಸಲರು ತುಮಕೂರಿನ ಪಾವಗಡದ ವೆಂಕಟಮ್ಮನಹಳ್ಳಿ ಶಾಲೆ ಬಳಿ ದಾಳಿ ಮಾಡಿದ್ದರು. ಘಟನೆಯಲ್ಲಿ 7 ಕೆಎಸ್ಆರ್‌ಪಿ ಪೊಲೀಸರು ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಕವಿ ವರವರ ರಾವ್ ಅವರನ್ನು ಆರೋಪಿಯನ್ನಾಗಿಸಲಾಗಿದೆ.
ಇದನ್ನೂ ಓದಿ:ಬಿಟ್‌ಕ್ವಾಯಿನ್ ಮಾಫಿಯಾದಲ್ಲಿ ಬಿಜೆಪಿಯವರ ಪಾತ್ರವಿದೆ.. ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ