ಜಾತ್ಯತೀತ ಶಕ್ತಿಗಳು ಒಂದಾಗಿ ಎಂಬುದು ನಮ್ಮ ಮುಂದೆ ಇರುವ ವಿಚಾರ: ಉಗ್ರಪ್ಪ - ರಾಜ್ಯಸಭೆ ಚುನಾವಣೆ ಕುರಿತು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಬೆಂಗಳೂರಿನಲ್ಲಿ ಪ್ರತಿಕ್ರಿಯೆ
9ನೇ ತರಗತಿಯಲ್ಲಿ ಬಸವಣ್ಣ ಅವರ ಲಿಂಗ ದೀಕ್ಷೆ ತಿರುಚಲಾಗಿದೆ. ನಾಡಗೀತೆ ತಿರುಚಲಾಗಿದೆ. ಅಂಬೇಡ್ಕರ್ ವಿಚಾರ ತಿರುಚಲಾಗಿದೆ ಎಂದು ಮಾಜಿ ಸಂಸದ ಬಿ. ಎನ್. ಚಂದ್ರಪ್ಪ ತಿಳಿಸಿದ್ದಾರೆ. ಇದೇ ವೇಳೆ ಜಾತ್ಯತೀತ ಶಕ್ತಿಗಳು ಒಂದಾಗಬೇಕಿದೆ ಎಂದು ವಿ ಎಸ್ ಉಗ್ರಪ್ಪ ಹೇಳಿದ್ದಾರೆ.

ಬೆಂಗಳೂರು: ರಾಜ್ಯಸಭೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಿ ಎಂಬುದು ನಮ್ಮ ಮುಂದೆ ಇರುವ ವಿಚಾರ ಎಂದು ಮಾಜಿ ಸಂಸದ ವಿ. ಎಸ್. ಉಗ್ರಪ್ಪ ತಿಳಿಸಿದ್ದಾರೆ.
ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಜತೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಎರಡು ದಿನಗಳ ಹಿಂದೆ ಎರಡನೇ ವೋಟ್ ಅನ್ನು ಕಾಂಗ್ರೆಸ್ಗೆ ನಾವು ಕೊಡುತ್ತೇವೆ, ಕಾಂಗ್ರೆಸ್ ಅವರು ಎರಡನೇ ವೋಟ್ ನಮಗೆ ಕೊಡಲಿ ಎಂದಿದ್ದಾರೆ. ಸರ್ಪಲೆಸ್, ಎಲಿಮಿನೇಟ್ ಬಗ್ಗೆ ಕಾಂಗ್ರೆಸ್ಗೆ ಅರಿವಿದೆ. ದೇವೇಗೌಡರು ಪ್ರಧಾನಿ ಆಗುವಾಗ 102 ಕಾಂಗ್ರೆಸ್ ಸಂಸದರಿಂದ ಪ್ರಧಾನಿ ಆದ್ರು. ಕಾಂಗ್ರೆಸ್ ಬೆಂಬಲದಿಂದ ಕುಮಾರಸ್ವಾಮಿ ಸಿಎಂ ಆದ್ರು. ರಾಜ್ಯಸಭೆ ಚುನಾವಣೆಗೆ ಹೆಚ್ ಡಿ ದೇವೇಗೌಡ ಅವರಿಗೆ ಹಿರಿತನ ನೋಡಿ ಬೆಂಬಲ ನೀಡಿದ್ವಿ ಎಂದರು.
ನಂತರ ಜೆಡಿಎಸ್ನವರು ಅಸಹಕಾರ ತೋರಿಸಿಕೊಂಡು ಬಂದಿದ್ದಾರೆ. ಹಿಂದೆ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ರು. ನಮ್ಮ ನಾಯಕರು ಮೆಸೇಜ್ ಮಾಡಿದ್ದಾರೆ. ನಾನು ಹಾಗೆ ಹೇಳಿಲ್ಲ ಎಂದು. 32 ವೋಟ್ ಮೊದಲ ಮತ ನಮಗೆ ನೀಡಿ ಕಾಂಗ್ರೆಸ್ ಜೆಡಿಎಸ್ ಒಟ್ಟಿಗೆ ಸೆಕ್ಯುಲರ್ ಬಗ್ಗೆ ಸಂದೇಶ ಕೊಡೋಣ. ಎರಡನೇ ಪ್ರಾಶಸ್ತ್ಯದ ಮತದ ಬಗ್ಗೆ ನಮಗೆ ಅರಿವಿದೆ ಎಂದು ಹೇಳಿದರು.
ಬಚ್ಚಲ ಮನೆಯಲ್ಲಿ ಇದ್ದ ಚಡ್ಡಿಯನ್ನು ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ತಲೆಮೇಲೆ ಹೊತ್ತುಕೊಂಡು ಬಂದಿದ್ದಾರೆ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಆರ್ ಎಸ್ ಎಸ್ ಇದೆ. ಚಡ್ಡಿಯನ್ನು ಬಿ ಎಲ್ ಸಂತೋಷ ಹೊರಲಿಲ್ಲ. ನಾರಾಯಣ ಸ್ವಾಮಿ ಮೂಲಕ ಹೊರಿಸಿದ್ದಾರೆ. ಅವರು ಕಳುಹಿಸಿರುವಂತಹ ಚಡ್ಡಿಗಳನ್ನು ನಾವು ಪ್ರಧಾನಿ ಮೋದಿ ಅವರಿಗೆ ಕಳುಹಿಸುತ್ತೇವೆ. ನಿಮ್ಮ ವಿಚಾರಧಾರೆ ಸರಿಯಿಲ್ಲ ಎಂಬುದನ್ನು ನಾವು ಪ್ರಧಾನಿಗೆ ಕಳುಹಿಸುತ್ತೇವೆ. ಪಠ್ಯಕ್ರಮ ಸರಿಯಿಲ್ಲ ಎಂದು ನಾವು ಹೇಳಿದ್ದೆವು. ಅದಕ್ಕೆ ವಿಕೃತವಾಗಿ ಚಡ್ಡಿಗಳನ್ನು ಕಳುಹಿಸಿದ್ದಾರೆ. ಇದು ಬಿಜೆಪಿಯ ವಿಕೃತ ಮನೋಭಾವನೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ಹೀಗೆ ಮಾಡಿದ್ದಾರೆ ಎಂದು ಉಗ್ರಪ್ಪ ಕಿಡಿಕಾರಿದರು.
ಸ್ವಾಮಿ ವಿವೇಕಾನಂದ ಅವರಿಗಿಂತ ಧರ್ಮ ಪ್ರಚಾರ ಮಾಡಿರುವುದು ಆರ್ಎಸ್ಎಸ್ನವರು. ಇವರ ಘಟಕ 42-43 ಇವೆ. 33,000 ಜನ ಆರ್ ಎಸ್ ಎಸ್ ಪ್ರಚಾರಕರು ದೇಶದಲ್ಲಿದ್ದಾರೆ. ರಾಜ್ಯದಲ್ಲಿ ನೂರು ಜನ ಇದ್ದಾರೆ. ಈ ಪ್ರಚಾರಕರಲ್ಲಿ ಎಷ್ಟು ಜನ ಎಸ್ಸಿ, ಎಸ್ಟಿ, ಒಕ್ಕಲಿಗ, ಲಿಂಗಾಯತ , ಹಿಂದುಳಿದ ಸಮುದಾಯದವರಿದ್ದಾರೆ?. 90% ಪುರೋಹಿತಶಾಹಿ ವರ್ಗ ಇದರಲ್ಲಿದೆ ಎಂದು ಆರೋಪಿಸಿದರು.
ಭಾರತಾಂಬೆಯ ಮಕ್ಕಳು 120 ಕೋಟಿ ಜನ ಇದ್ದಾರೆ.. ಎಲ್ಲಾ ಬ್ರಾಹ್ಮಣರು ಕೆಟ್ಟವರಲ್ಲ. ಗೋಡ್ಸೆ ವಿಚಾರಧಾರೆ ಇರುವವರು 90% ಇದ್ದಾರೆ. ಅವರಲ್ಲಿ ಈ ಬ್ರಾಹ್ಮಣರು 95% ಸಂಘಟನೆ ಕಂಟ್ರೋಲ್ ಮಾಡುತ್ತಾರೆ. ರಚ್ಚು ಭೈಯಾ ಅವರನ್ನು ಬಿಟ್ರೆ ಎಲ್ಲಾ ನಾಗಪುರ ಚಿತ್ ಬ್ರಾಹ್ಮಣದವರು. ಆರ್ ಎಸ್ ಎಸ್ ಕಚೇರಿಯಲ್ಲಿ ಭಾರತದ ಬಾವುಟ ಹಾರಿಸಲ್ಲ. ಹೆಡಗೇವಾರ್, ಭಾರತಮಾತೆ, ಗೋಲ್ವಾಲ್ಕರ್ಗೆ ಮಾತ್ರ ನೀವು ಫೋಟೊ ಇಟ್ಟಿದ್ದೀರಿ. ನಿಜವಾದ ಹಿಂದುತ್ವ ಇರುವುದು ವಸುದೈವಕುಟುಂಬಕಂ. ಭಾರತಾಂಬೆಯ ಮಕ್ಕಳು 120 ಕೋಟಿ ಜನ ಇದ್ದಾರೆ. ಕಾಂಗ್ರೆಸ್ಗೆ ಎಲ್ಲಾ ಮಕ್ಕಳು ಸಮಾನರು ಎಂದು ಹೇಳಿದರು.
ನಾಡಗೀತೆ ತಿರುಚಲಾಗಿದೆ.. ಮಾಜಿ ಸಂಸದ ಬಿ. ಎನ್ ಚಂದ್ರಪ್ಪ ಮಾತನಾಡಿ, ಬಸವಣ್ಣ ಅವರು ವಿಶ್ವ ಗುರು ಅಕ್ಕ ನಾಗಮನ್ನಿಗೆ ಉಪನಯನ ಆಗುವುದನ್ನು ವಿರೋಧ ಮಾಡುತ್ತಾರೆ. ಇದು ಮಹಿಳೆಯರಿಗೆ ಮಾಡುವ ಅಪಮಾನ ಎಂದು ಕಲ್ಯಾಣದ ಕಡೆ ತೆರಳುತ್ತಾರೆ. 9ನೇ ತರಗತಿಯಲ್ಲಿ ಬಸವಣ್ಣ ಅವರ ಲಿಂಗ ದೀಕ್ಷೆ ತಿರುಚಲಾಗಿದೆ. ನಾಡಗೀತೆ ತಿರುಚಲಾಗಿದೆ. ಅಂಬೇಡ್ಕರ್ ವಿಚಾರ ತಿರುಚಲಾಗಿದೆ. ಸಂವಿಧಾನದ ಅಡಿಯಲ್ಲಿ ಒಳ್ಳೆ ಖಾತೆ ನಿರ್ವಹಣೆ ಮಾಡುವವರು ಸುಮ್ಮನೇ ಇದ್ದಾರೆ. ನಮ್ಮ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ನಾವೆಲ್ಲರೂ ಸರ್ಕಾರದ ಧೋರಣೆಯನ್ನು ವಿರೋಧ ಮಾಡುತ್ತಿದ್ದೇವೆ ಎಂದರು.
ಓದಿ: ಜೆಡಿಎಸ್ ಅಭ್ಯರ್ಥಿ ಕಣದಿಂದ ನಿವೃತ್ತಿ ಮಾಡಿಸೋದೇ ಈಗ ಸಂಧಾನ: ಸಿದ್ದರಾಮಯ್ಯ